ಪ್ರತೀ ವರ್ಷ ಮುಂಗಾರು ಮಳೆ ಆರಂಭದ ಒಂದು ತಿಂಗಳ ನಂತರ ಬರುವ ಅಮವಾಸ್ಯೆಗೆ ಗುಳ್ಳವ್ವನ ಆಗಮನ
ಉದಯರಶ್ಮಿ ದಿನಪತ್ರಿಕೆ
ವರದಿ: ಇಲಾಹಿ ಇ.ಜಮಖಂಡಿ
ಚಿಮ್ಮಡ: ಮಣ್ಣೆತ್ತಿನ ಅಮವಾಸ್ಯೆ ಬಂತೆಂದರೆ ಹೆಣ್ಣು ಮಕ್ಕಳಿಗೆ ಸಂಭ್ರಮವೋ ಸಂಭ್ರಮ. ಅದಕ್ಕೆ ಕಾರಣ ಹೆಣ್ಣು ಮಕ್ಕಳ ವಿಶೇಷ ಹಬ್ಬ ಗುಳ್ಳವ್ವನ ಆಗಮನ.
ಪ್ರತೀ ವರ್ಷ ಮುಂಗಾರು ಮಳೆ ಆರಂಭದ ಒಂದು ತಿಂಗಳ ನಂತರ ಬರುವ ಈ ಅಮವಾಸ್ಯೆ ಉತ್ತರ ಕರ್ನಾಟಕದಲ್ಲಿ ತನ್ನದೇ ಆದ ವೈಶಿಷ್ಟ್ಯತೆ ಪಡೆದುಕೊಂಡಿದೆ. ಮುಂಗಾರಿನ ಮೇಘರಾಜನ ದರ್ಶನದಿಂದ ಧರೆ ನವ ವಧುವಿನಂತೆ ಸಿಂಗಾರಗೊಂಡು ಎಲ್ಲೆಡೆ ಹಸಿರಿನಿಂದ ಕಂಗೊಳಿಸಿರುತ್ತಾಳೆ, ಸಕಲ ಜೀವ ಸಂಪತ್ತಿಗೆ ಆಸರೆಯಾಗಿರುವ ಪ್ರಕೃತಿಮಾತೆ ಆಷಾಢ ಮಾಸದಲ್ಲಿ ಜೇಡಿ ಮಣ್ಣಿನಿಂದ ತಯಾರಿಸಿದ ಗುಳ್ಳವ್ವನ ಪ್ರತಿರೂಪದಲ್ಲಿ ಪೂಜಿಸಲ್ಪಡುತ್ತಾಳೆ. ಈ ಭಾಗದಲ್ಲಿ ಅದರ ಪೂಜೆ ಹೆಣ್ಣು ಮಕ್ಕಳಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಠಿಸಿರುತ್ತದೆ. ಮನ್ನೆತ್ತಿನ ಅಮವಾಸ್ಯೆ ನಂತರ ನಾಲ್ಕು ವಾರಗಳವರೆಗೆ ಪ್ರತಿ ಮಂಗಳವಾರ ಬೆಳಿಗ್ಗೆ ಮಹಿಳೆಯರು ಕುಂಬಾರ ಓಣಿಗೆ ಹೋಗಿ ಅಲ್ಲಿ ತಯಾರಿಸಿದ ಹಲವು ಆಕಾರಗಳ ಗುಳ್ಳವ್ವನ ಕಲಾಕೃತಿಗಳಲ್ಲಿ ತಮಗೆ ಬೇಕಾದ ಒಂದನ್ನು ಆರಿಸಿ ಕಟ್ಟಿಗೆಯ ಮಣೆಯ ಮೇಲೆ ಕುಳ್ಳರಿಸಿ ಸಂಭ್ರಮದೊಂದಿಗೆ ಮನೆಗೆ ತರುತ್ತಾರೆ. ನಂತರ ಮನೆಯಲ್ಲಿ ಗುಳ್ಳವ್ವಳಿಗೆ ಬಾಗಿಲು ಕೊರೆದು ನವಿಲು ಆಕಾರದಲ್ಲಿ ಕೂಡ್ರಿಸುತ್ತಾರೆ ಗುಲಗಂಜಿ ಹಾಗೂ ಬಣ್ಣ ಬಣ್ಣಗಳಿಂದ ತಯಾರಿಸಿದ ಕುಸುಬಿ, ಕುಂಕುಮ, ಹಾಗೂ ವಿವಿಧ ಅಲಂಕಾರಿಕ ಸಾಮಗ್ರಿಗಳಿಂದ ಅದನ್ನು ಶೃಂಗರಿಸುತ್ತಾರೆ. ಸಂಜೆಯಾಗುತಿದ್ದಂತೆಯೇ ಹೆಣ್ಣು ಮಕ್ಕಳು ಗುಂಪಾಗಿ ಮನೆ ಮನೆಗಳಿಗೆ ತೆರಳಿ ಗುಳ್ಳವ್ವನ ಪದ ಹಾಡುತ್ತಾ ಆರತಿ ಬೆಳಗುತ್ತಾರೆ. ಮರುದಿನ ವಿಶೇಷ ಬಗೆಯ ಅಡುಗೆ ತಯಾರಿಸಿ ಸಿಹಿ ಪದಾರ್ಥಗಳೊಂದಿಗೆ ಪ್ರಕೃತಿ ಸೌಂದರ್ಯ ಆಸ್ವಾದಿಸಲು ಮನೆ ಮಂದಿಯೆಲ್ಲ ಸೇರಿ ವಿಶೇಷ ಸ್ಥಳಗಳಿಗೆ ತೆರಳುತ್ತಾರೆ. ಕೆಲವರು ಕುಟುಂಬ ಸಮೇತ ಪ್ರವಾಸಕ್ಕೆ ತೆರಳುವುದೂ ಉಂಟು. ಇದು ಆಶಾಡಮಾಸ ಮುಗಿಯುವವರೆಗೂ ಪ್ರತಿ ವಾರ ನಡೆಯುವ ಸಂಭ್ರಮದ ಹಬ್ಬ. ಇದಕ್ಕೆ ಜಾತಿ ಮತಗಳ ಭೇದವಿಲ್ಲದೆ ಪ್ರತಿಯೊಬ್ಬರ ಮನೆಯಲ್ಲಿ ನಡೆಯುವ ಜಾತ್ರೆಯೆಂದೇ ಹೇಳಬಹುದು.
ತಯಾರಿಕೆಯಲ್ಲಿ ಆಧುನಿಕತೆ; ಈ ಹಿಂದೆ ಬಂಡೆಗಾಲಿಯಂತಹ ದೊಡ್ಡ ಗಾಲಿಯನ್ನು ಕೈಯಿಂದ ಇಬ್ಬರು ತಿರುಗಿಸಿ ಮತ್ತೊಬ್ಬರು ಜೇಡಿಮಣ್ಣನ್ನು ಹದಗೊಳಿಸಿ ಗಾಲಿ ನಡುವೆ ಹಸಿ ಮಣ್ಣನ್ನು ಇಟ್ಟು ಗುಳ್ಳವ್ವನನ್ನು ತಯಾರಿಸಲಾಗುತಿತ್ತು. ಈ ತಯಾರಿಕೆಗೆ ಈಗ ಆಧುನಿಕ ಸ್ಪರ್ಶ ನೀಡಿರುವುದರಿಂದ ವಿದ್ಯುತ್ ಮೋಟಾರು ಅಳವಡಿಸಿ ಸುಲಭ ವಿಧಾನದಲ್ಲಿ ತಯಾರಿಸಲಾಗುತ್ತದೆ.

ಮಣ್ಣಿನಕೊರತೆ
ಈ ಹಿಂದೆ ಹೇರಳವಾಗಿ ದೊರೆಯುತಿದ್ದ ಜೇಡಿ ಮಣ್ಣುಗೆ ಈಗ ಕೊರತೆ ಉಂಟಾಗಿ ಅದನ್ನು ಸಂಗ್ರಹಿಸಲು ಈಗ ಪರದಾಡುವಂತಾಗಿದೆಯಂದು ತಿಪ್ಪಣ್ಣಪ್ಪ ಕುಂಬಾರ ಹೇಳುತ್ತಾರೆ.
ಮೊದಲು ಉಚಿತವಾಗಿಯೇ ಗ್ರಾಮದಲ್ಲಿಯೇ ದೊರೆಯುತಿದ್ದ ಈ ಮಣ್ಣಿನ ಬಳಕೆಯಿಂದ ಭೂಮಿಯ ಫಲವತ್ತತೆಗೆ ಧಕ್ಕೆಯುಂಟಾಗುತ್ತಿದ್ದರಿಂದ ರೈತರು ಮಣ್ಣು ಕೊಡಲು ಹಿಂದೇಟು ಹಾಕುತಿದ್ದಾರೆ ಇದರಿಂದಾಗಿ ನದೀತೀರದ ಗ್ರಾಮಗಳಿಗೆ ಹೋಗಿ ಮಣ್ಣನ್ನು ತರಬೇಕಾಗಿದೆ, ನೆರೆಯ ಪಟ್ಟಣಗಳಿಗೂ ಮಣ್ಣಿನ ಗುಳ್ಳವ್ವ ಹಾಗೂ ಮನ್ನೆತ್ತುಗಳನ್ನು ನಾವೇ ತಯಾರಿಸಿ ಕೊಡಬೇಕಾಗಿರುವುದರಿಂದ ಪ್ರತಿಸಾರಿ ಮಣ್ಣಿಗಾಗಿ ಅಲೆದಾಡಬೇಕಾಗಿದೆ ಎನ್ನುತ್ತಾರೆ.
ಗ್ರಾಮೀಣ ಬಾಗಗಳಲ್ಲಿ ಇಂತಹ ಹಬ್ಬಗಳಿಗೆ ಇನ್ನೂ ಸ್ವಲ್ಪಮಟ್ಟದಲ್ಲಿ ಪ್ರಾಮುಖ್ಯತೆ ಇದೆ. ಆದರೆ ನಗರ ಪ್ರದೇಶಗಳಲ್ಲಿ ಈ ಆಚರಣೆಗಳು ನಶಿಸಿ ಹೋಗುತ್ತಿರುವುದು ದುರದೃಷ್ಟಕರ.

ಕಳೆಗುಂದುತ್ತಿರುವ ಹಬ್ಬ
ಆಧುನಿಕತೆಯ ಭರಾಟೆಯಲ್ಲಿ ಭಾರತೀಯ ಸಾಂಪ್ರದಾಯಿಕ ಹಬ್ಬಗಳು ಕಳೆಗುದುತ್ತಿದ್ದು, ನವ ಪೀಳಿಗೆ ಇಂತಹ ಹಬ್ಬಗಳಿಂದ ದೂರ ಉಳಿಯುತ್ತಿರುವುದು ನಮ್ಮ ಸಂಸ್ಕೃತಿಗೆ ಬಿದ್ದ ಪೆಟ್ಟು ಎನ್ನಬಹುದು. ಈ ಮೊದಲು ಇಂತಹ ಅನೇಕ ಹಬ್ಬಗಳಿಗಾಗಿ ಗ್ರಾಮೀಣ ಭಾಗದ ಜನ ಕಾಯುತಿದ್ದರು. ಗುಳ್ಳವ್ವನನ್ನು ಖರೀದಿಸಲು ಕುಂಬಾರ ಓಣಿಗೆ ಹೋಗಿ ತರುತ್ತಿದ್ದರು. ಆದರೆ ಈಗ ಮನೆ ಮನೆಗಳಿಗೆ ಒಯ್ದು ಮಾರಾಟ ಮಾಡುವ ಸ್ಥಿತಿ ಇದ್ದು ಕುಂಬಾರಿಕೆಗೆ ಗೌರವವಿಲ್ಲದಂತಾಗಿದೆ ಎಂದು ದುಖದಿಂದ ಹೇಳುತ್ತಾರೆ ಗುಳ್ಳವ್ವ ತಯಾರಕ ಪರಪ್ಪ ಕುಂಬಾರ.

