ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಕ್ಷೇಮಪಾಲನ ನಿರ್ದೇಶನಾಲಯ, ಕ್ರೀಡಾ ನಿರ್ದೇಶನಾಲಯ ಹಾಗೂ ವಸತಿ ನಿಲಯಗಳ ಸಹಯೋಗದಲ್ಲಿ ‘ವಾರ್ಷಿಕ ದಿನಾಚರಣೆ-೨೦೨೫’ ಕಾರ್ಯಕ್ರಮವನ್ನು ಇದೇ ದಿ. ೧೬ ರಂದು ಬೆಳಗ್ಗೆ ೧೦:೩೦ ಗಂಟೆಗೆ ವಿವಿಯ ನೂತನ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಹಿರಿಯ ಐ.ಎ.ಎಸ್ ಅಧಿಕಾರಿ ಮತ್ತು ಮಹಿಳಾ ವಿವಿಯ ಸಂಸ್ಥಾಪಕ ಮಾಜಿ ವಿಶೇಷಾಧಿಕಾರಿ ಡಾ.ಎಸ್.ಎಂ.ಜಾಮದಾರ, ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಡಾ.ಶುಭಾ ಮರವಂತೆ ಹಾಗೂ ಉಪ ಪೊಲೀಸ್ ವರಿಷ್ಠಾಧಿಕಾರಿ ಬಸವರಾಜ ಎಫ್. ಯಲಿಗಾರ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಬಿ. ಕೋರಿಶೆಟ್ಟಿ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ಸಿಂಡಿಕೇಟ್ ಸದಸ್ಯೆ ಡಾ.ರಿಹಾನಾ ಜಬೀನ್, ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಸಂಯೋಜಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿರಲಿದ್ದಾರೆ ಎಂದು ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

