ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ನಾಡಿನ ಬಹುದೊಡ್ಡ ಪರಂಪರೆಯನ್ನು ಎತ್ತಿ ಹಿಡಿಯುವ ಮೂಲಕ ಬಯಸಿ ಬಂದ ಭಕ್ತರ ಭವಬಂಧನ ಕಳೆದು ಸುಜ್ಞಾನದಡೆಗೆ ಕೊಂಡೊಯ್ಯುವ ಕೆಲಸ ಮಠ ಮಾನ್ಯಗಳು ಮಾಡುತ್ತಿವೆ ಎಂದು ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಹೇಳಿದರು.
ಪಟ್ಟಣದ ಶ್ರೀ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನ ಹಾಗೂ ಹಿರೇಮಠ ಸಂಸ್ಥಾನದಲ್ಲಿ ಆಶ್ರಯದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ “ಗುರುಪೂರ್ಣಿಮೆ” ಮತ್ತು ಶಿವಾನುಭವ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾಸಿಕ ಸತ್ಸಂಗದ ಜೊತೆ ಜೊತೆಗೆ ಸಾಹಿತ್ಯ, ಸಂಗೀತ, ಕಲೆ, ಸಾಂಸ್ಕೃತಿಕ, ಕಾರ್ಯಕ್ರಮಗಳನ್ನು ಆಯೋಜಿಸುವ ದೃಢ ಸಂಕಲ್ಪದೊಂದಿಗೆ ಆರಂಭಗೊಂಡ ಶಿವಾನುಭವ ಗೋಷ್ಠಿ ಹತ್ತು ವರ್ಷ ಪೂರೈಸುತ್ತಿರುವುದು ಹೆಮ್ಮೆಯ ವಿಷಯ ಎಂದವರು, ಸದ್ಭಕ್ತರ ಬಾಳಲಿ ಜ್ಞಾನ ದೀವಿಗೆ ಹೊತ್ತಿಸಲು ಹೊಸ ಭಾಷ್ಯ ಬರೆದ ಚನ್ನಬಸವ ಶಿವಾಚಾರ್ಯರ ಕಾರ್ಯ ಅಭಿನಂದನೀಯ ಎಂದರು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಚನ್ನಬಸವ ಶಿವಾಚಾರ್ಯರು, ಶಿವಾನುಭವ ಗೋಷ್ಠಿ ಸಾಹಿತ್ಯ ಸಂಗೀತ ಕಾರ್ಯಕ್ರಮ ಮುನ್ನಡೆಸುತ್ತಿರುವ ಮಹಾನ್ ಕಾರ್ಯಕ್ಕೆ ಸದ್ಭಕ್ತರ ಸಹಕಾರವಿದ್ದು, ಶಿವಾನುಭವ ಗೋಷ್ಠಿ ಹೀಗೆ ನಿರಂತರವಾಗಿ ಮುನ್ನಡೆಯುತ್ತಿದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಸಂಶೋಧಕ ನಿಂಗನಗೌಡ ದೇಸಾಯಿ ಮಾತನಾಡಿ, ಈ ಭಾಗದ ಕವಿ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಶ್ರೀಮಠದ ದಶಮಾನೋತ್ಸವ ಸಮಾರಂಭ ದಶ ದಿಕ್ಕಿನಲ್ಲಿ ಘಮಘಮಿಸಲಿ ಎಂದು ಹೇಳಿದರು.
ವಲಯ ಕನ್ನಡ ಕಸಾಪ ಅಧ್ಯಕ್ಷ ಮಡಿವಾಳಪ್ಪಗೌಡ ಪಾಟೀಲ ಹೆಗ್ಗನದೊಡ್ಡಿ ಮಾತನಾಡಿದರು.
ಇದೇ ವೇಳೆ ಪಾದಯಾತ್ರೆ ಮೂಲಕ ಮೆಕ್ಕಾ ಮದೀನಾ ತಲುಪಿ ‘ಅಲ್ಲಾಹನ’ ಕೃಪೆಗೆ ಪಾತ್ರರಾಗಿ ತಾಯ್ನಾಡಿಗೆ ಮರಳಿದ ಜಿಲಾನಿ ಸೈಯದ್ ಹಾಗೂ ಕಳೆದ ಹತ್ತು ವರ್ಷಗಳಿಂದ ಶಿವಾನುಭವ ಗೋಷ್ಠಿಯ ನಿರೂಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಯಂಕನಗೌಡ ಎಸ್ ಪಾಟೀಲ ಮಾಲಹಳ್ಳಿ ಯವರನ್ನು ಶ್ರೀಮಠದಿಂದ ಸನ್ಮಾನಿಸಿ ಗೌರವಿಸಲಾಯಿತು. ಶರಣಕುಮಾರ ಯಾಳಗಿ ಹಾಗೂ ಯಮನೇಶ ಯಾಳಗಿ ಇವರಿಂದ ಸಂಗೀತ ಕಾರ್ಯಕ್ರಮ ಮೂಡಿ ಬಂತು, ಪತ್ರಕರ್ತ ಸಾಹಿತಿ ವೀರಣ್ಣ ಕಲಿಕೇರಿ, ಗುಡದಯ್ಯ ದಾವಣಗೆರಿ, ಅಭಿಷೇಕ್ ಪಾಟೀಲ, ಅವ್ವಣ್ಣ ಮಡಿವಾಳಕರ್, ನಿಜಗುಣಿ ವಿಶ್ವಕರ್ಮ, ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು ಮಹಿಳೆಯರು ಮಕ್ಕಳು ಉಪಸ್ಥಿತರಿದ್ದರು ಡಾ ಯಂಕನಗೌಡ ಎಸ್ ಪಾಟೀಲ ನಿರೂಪಿಸಿ, ವಂದಿಸಿದರು.