ಕಲಬುರಗಿ ಎಪಿಎಂಸಿ ಕೃಷಿ ಉತ್ಪನ್ನೇತರ ಅಂಗಡಿ ತೆರವಿಗೆ ಸಚಿವರಿಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಕೃಷಿ ಉತ್ಪನ್ನ ವಹಿವಾಟಿನ ಹೊರತಾದ ಅಂಗಡಿಗಳ ವ್ಯಾಪಾರಿಗಳನ್ನು ತೆರವುಗೊಳಿಸುವಂತೆ ಕಲಬುರಗಿಯ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ನಿಯೋಗ ಕೃಷಿ ಮಾರುಕಟ್ಟೆ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವರಾದ ಶಿವಾನಂದ ಪಾಟೀಲ ಅವರಿಗೆ ಮನವಿ ಸಲ್ಲಿಸಿತು.
ಶುಕ್ರವಾರ ಸಚಿವರ ತವರು ಕ್ಷೇತ್ರದ ಬಸವನಬಾಗೇವಾಡಿ ಪಟ್ಟಣದಲ್ಲಿ ಸಂಘಟನೆಯ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ ನೇತೃತ್ವದ ನಿಯೋಗದಲ್ಲಿ ಬಂದು ಸಚಿವ ಶಿವಾನಂದ ಪಾಟೀಲ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಕೃಷಿ ಉತ್ಪನ್ನ ವಹಿವಾಟು ರಹಿತ ಅಂಗಡಿಗಳೇ ಹೆಚ್ಚಾಗಿವೆ. ಹೀಗಾಗಿ ಕೂಡಲೇ ಕೃಷಿ ಉತ್ಪನ್ನ ವಹಿವಾಟೇತರ ಅಂಗಡಿಗಳನ್ನು ಕೂಡಲೇ ತೆರವು ಮಾಡಬೇಕು ಎಂದು ಸಚಿವರಿಗೆ ಮನವಿ ಸಲ್ಲಿಸಿತು.
ಸದರಿ ಸಮಸ್ಯೆ ಮುಂದಿಟ್ಟುಕೊಂಡು ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಹೋರಾಟ ಮಾಡಿದ್ದೇವೆ. ಇದೀಗ ಕಳೆದ 46 ದಿನಗಳಿಂದ ಕಲಬುರಗಿಯಲ್ಲಿ ಧರಣಿ ನಡೆಸಿದ್ದೇವೆ. ಇಲಾಖೆಯ ಅಧಿಕಾರಿಗಳು ಸರ್ಕಾರದ ಆದೇಶ ಪಾಲಿಸುವಲ್ಲಿ ಸಕಾರಾತ್ಮಕವಾಗಿದ್ದರೂ ಕೃಷಿ ಉತ್ಪನ್ನೇತರ ಅಂಗಡಿಗಳ ಮಾಲೀಕರು ತೆರವು ಮಾಡುತ್ತಿಲ್ಲ ಎಂದು ಸಮಸ್ಯೆ ನಿವೇದಿಸಿದರು.
ನಿಯೋಗದ ಮನವಿ ಆಲಿಸಿದ ಸಚಿವರಾದ ಶಿವಾನಂದ ಪಾಟೀಲ ಅವರು, ಹಿಂದಿನ ಸರ್ಕಾರದಲ್ಲಿ ಆಗಿದ್ದ ಲೋಪ ಸರಿಪಡಿಸುವಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಕೃಷಿ ಉತ್ಪನ್ನ ವಹಿವಾಟಿನ ಹೊರತಾಗಿ ಇತರೆ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ. ರಾಜ್ಯದಾದ್ಯಂತ ಈ ತೆರವು ಕಾರ್ಯಾಚರಣೆ ನಡೆದಿದೆ. ಕಲಬುರಗಿ ಪ್ರಾಂಗಣದಲ್ಲೂ ತೆರವು ಕಾರ್ಯಾಚರಣೆ ನಡೆದಿದೆ. ಹೀಗಾಗಿ ಧರಣಿ ಹಿಂಪಡೆಯುವಂತೆ ಮನವಿ ಮಾಡಿದರು.
ಸಚಿವರ ಭೇಟಿ ಬಳಿಕ ಪ್ರತಿಕ್ರಿಯಿಸಿದ ಎಂ.ಎಸ್. ಪಾಟೀಲ ನರಿಬೋಳ, ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರ ಭೇಟಿ ಸಕಾರಾತ್ಮಕವಾಗಿದೆ. ಸಚಿವರೊಂದಿಗಿನ ಚರ್ಚೆ, ಸ್ಪಂದನೆ ಸಂತೃಪ್ತಿ ತಂದಿದೆ ಎಂದು ಸಂತಸ ವ್ಯಕಪಡಿಸಿದರು.
ನಿಯೋಗದಲ್ಲಿ ಶ್ರವಣಕುಮಾರ ನಾಯಕ, ಪರಮೇಶ್ವರ ಬಿರಾಳ, ಈಶ್ವರ ಹಿಪ್ಪರಗಿ, ತಾತಾಗೌಡ ಪಾಟೀಲ, ಸುನಿಲ ಸಿರಕೆ, ದಿಲ್ದಾರಸಿಂಗ್, ಶರಣಗೌಡ ಪಾಟೀಲ, ಯಲ್ಲಪ್ಪ ದೊರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕೃಷಿ ಮಾರುಕಟ್ಟೆ ಇಲಾಖೆಯ ಅಧಿಕಾರಿಗಳಾದ ಕೃಷ್ಣ, ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಅಲ್ಲಾಭಕ್ಷ ಹಾಜರಿದ್ದರು.