ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಇಲ್ಲಿನ ಜಲನಗರ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಕಳೆದ ೪ ದಿನಗಳಿಂದ ಮಹಾನಗರ ಪಾಲಿಕೆ ಪೌರ ಕಾರ್ಮಿಕರು ನಡೆಸುತ್ತಿರುವ ಮುಷ್ಕರಕ್ಕೆ ಜಿಲ್ಲಾ ಬಿಜೆಪಿ ಘಟಕದಿಂದ ಬೆಂಬಲ ಸೂಚಿಸಿದರು.
ಈ ವೇಳೆ ರಾಜ್ಯ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಮಾತನಾಡಿ, ಬಿಜೆಪಿ ಸರ್ಕಾರವಿದ್ದಾಗ ೭ನೇ ವೇತನ ಆಯೋಗ ರಚಿಸಿತ್ತು. ಆದರೆ ೨ ವರ್ಷವಾದರೂ ರಾಜ್ಯ ಸರ್ಕಾರ ಜಾರಿ ಮಾಡಿಲ್ಲ. ಕಳೆದ ೪ ದಿನಗಳಿಂದ ಕೆಲಸ ಬಿಟ್ಟು ರಾಜ್ಯದ ಎಲ್ಲ ಮಹಾನಗರ ಪಾಲಿಕೆ ಎದುರು ಧರಣಿ ನಡೆಸುತ್ತಿರುವ ಪೌರ ಕಾರ್ಮಿಕರ ಕಷ್ಟ ಕೇಳಲು ಜಿಲ್ಲೆಯ ಯಾವೊಬ್ಬ ಶಾಸಕರು ಬಂದಿಲ್ಲ. ಆದ್ದರಿಂದ ನಾಳೆಯಿಂದ ಅವರ ಮನೆಯ ಎದುರಿಗೆ ನಿಮ್ಮ ಕಸ ಹಾಕಿ ಆಗ ಅವರಿಗೆ ಬುದ್ದಿ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹೇಂದ್ರ ನಾಯಕ ಮಾತನಾಡಿ, ಪೌರ ಕಾರ್ಮಿಕರ ೬ ಬೇಡಿಕೆಗಳು ಭಿಕ್ಷೆ ಅಲ್ಲ, ಅದು ನಿಮ್ಮ ಹಕ್ಕು. ಅದರಲ್ಲಿ ಹೊಸ ಬೇಡಿಕೆಯಲ್ಲ. ಸರ್ಕಾರಿ ನೌಕರರ ಸಿಗುವ ಸೌಲಭ್ಯ ಗಳಾದ ಕೆಜೆಐಡಿ, ಎನ್‌ಪಿಎಸ್ ಸೌಲಭ್ಯಗಳು ಬೇಕು ಎನ್ನುವ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ವ್ಯಾಪಾರ ವಾಣಿಜ್ಯ ಪ್ರಕೋಷ್ಠ ಸಂಚಾಲಕ ವಿಜಯಕುಮಾರ ಕುಡಿಗನೂರ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೈಚಬಾಳ ಮಾತನಾಡಿದರು.
ಎಸ್.ಎ.ಪಾಟಿಲ್ ಮಾಜಿ ನಗರಸಭೆ ಸದಸ್ಯರಾದ ರವಿಕಾಂತ್ ಬಗಲಿ, ಪ್ರಕಾಶ್ ಮಿರ್ಜಿ ಚಿದಾನಂದ ಚಲವಾದಿ, ವಿಜಯ ಜೋಶಿ, ಹರ್ಷ ಗೌಡ ಪಾಟೀಲ್, ಪಾಪು ಸಿಂಗ್ ರಜಪೂತ ಬಸವರಾಜ್ ಹಳ್ಳಿ, ವಿಕಾಸ್ ಪದಕಿ, ಸಂದೀಪ್ ಪಾಟೀಲ್, ಮಲ್ಲಮ್ಮ ಜೋಗುರು , ಸಂಪತ್ ಕುವಳ್ಳಿ ರವಿ ಬಿರಾದಾರ್, ವಿಜಯ್ ಹಿರೇಮಠ್, ಚನ್ನು ಚಿನಗುಂಡಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.