ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ ಗುಣಾರಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಹಾಗೂ ತುಳಜಾ ಭವಾನಿ ಕಾಲೇಜ ಆಫ್ ನರ್ಸಿಂಗ್ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಗರದ ತುಳಜಾ ಭವಾನಿ ನರ್ಸಿಂಗ ಕಾಲೇಜ್‌ನಲ್ಲಿ ಜಿಲ್ಲಾ ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ನಿರ್ದೇಶನಾಲಯದ ರಾಜ್ಯ ಸಾಂಕ್ರಾಮಿಕ ರೋಗಗಳ ತಜ್ಞವೈದ್ಯರಾದ ಡಾ|| ಶ್ರೀನಿವಾಸ ಎಸ್ ಆರ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸಂಪತ್ ಗುಣಾರಿ ಜಂಟಿಯಾಗಿ ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ ಗುಣಾರಿ ಅವರು ಮಾತನಾಡಿ, ಜನಸಂಖ್ಯೆ ದೇಶದ ಅಭಿವೃದ್ಧಿಗೆ ಒಂದು ಅತ್ಯಮೂಲ್ಯ ಸಂಪನ್ಮೂಲ. ಆದರೆ ಜನಸಂಖ್ಯೆ ಮಿತಿ ಮೀರಿದರೆ ದೇಶದ ಅಭಿವೃದ್ಧಿಗೆ ಮಾರಕ. ಇಂದು ಜಗತ್ತಿನ ಜನಸಂಖ್ಯೆ ೭.೯ ಶತಕೋಟಿ ಇದೆ. ಕ್ರಿಸ್ತಶಕ ೨೦೨೫ಕ್ಕೆ ೮೦೦ ಶತಕೋಟಿ ದಾಡುವ ಸಾಧ್ಯತೆ ಇದೆ. ದೇಶದಲ್ಲಿ ಪ್ರತಿ ವರ್ಷ ೧ ಕೋಟಿ ೫೫ ಲಕ್ಷ ಜನಸಂಖ್ಯೆ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಪ್ರತಿ ವರ್ಷ ೭ ಲಕ್ಷ ೭೫ ಸಾವಿರದಷ್ಟು ಜನಸಂಖ್ಯೆ ಹೆಚ್ಚವರಿಯಾಗುತ್ತಿದೆ. ಈ ವೇಗದಲ್ಲಿ ಜನಸಂಖ್ಯೆಯು ಬೆಳೆಯುತ್ತಿದ್ದರೆ ಭಾರತವು ಮುಂದಿನ ೩೫ ವರ್ಷಗಳಲ್ಲಿ ೨೦೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಲಿದೆ. ಸುಧಾರಿಸಿದ ಆರೋಗ್ಯ ಸೇವಾ ಸೌಲಭ್ಯಗಳು, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಿಂದಾಗಿ ನಿಯಂತ್ರಣದಲ್ಲಿರುವ ಸಾಂಕ್ರಾಮಿಕ ರೋಗಗಳು, ತಾಯಿ ಮಕ್ಕಳ ಆರೋಗ್ಯ ಕಾರ್ಯಕ್ರಮದಡಿಯಲ್ಲಿನ ಗುಣಾತ್ಮಕ ಸೇವೆಗಳು, ರಾಷ್ಟ್ರೀಯ ಆರೋಗ್ಯ ಅಭಿಯಾನ ಮುಂತಾದ ಯೋಜನೆಗಳಿಂದಾಗಿ, ಮರಣ ಪ್ರಮಾಣವು ಕಡಿಮೆಗೊಂಡಿರುತ್ತದೆ. ಈ ವರ್ಷ ಆರೋಗ್ಯಕರ ಸಮಯ ಮತ್ತು ಯೋಜಿತ ಪೋಷಕತ್ವಕ್ಕಾಗಿ ಗರ್ಭಧಾರಣೆಯ ನಡುವೆ ಅಂತರವಿರಲಿ ಎಂಬ ಘೋಷವಾಕ್ಯದಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ರಾಜೇಶ್ವರಿ ಗೊಲಗೇರಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ|| ಪರಶುರಾಮ ಹಿಟ್ನಳ್ಳಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ|| ಅಪ್ಪಾಸಾಹೇಬ ಇನಾಮದಾರ ಪ್ರಭಾರ ತಾಲೂಕಾ ಆರೋಗ್ಯ ಅಧಿಕಾರಿ ಡಾ|| ಕೆ ಡಿ ಗುಂಡಬಾವಡಿ, ತುಳಜಾ ಭವಾನಿ ಕಾಲೇಜ ಆಫ್ ನರ್ಸಿಂಗ್ ಪ್ರಾಚಾರ್ಯರಾದ ಪ್ರೊ: ಸಚೀನ್ ಕಿರಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ ಎಮ್ ಕೊಲೂರ, ಸುರೇಶ ಹೊಸಮನಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ರೇಖಾ ದಶವಂತ, ಮೇಲ್ವಿಚಾರಣಾಧಿಕಾರಿ ಮೋತಿಲಾಲ ಲಮಾಣಿ, ಕುಮಾರ ರಾಠೋಡ ಸೇರಿದಂತೆ ನರ್ಸಿಂಗ್ ಕಾಲೇಜ ಬೋಧಕರು ಮತ್ತು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಉಪಸ್ಥಿತರಿದ್ದರು.
ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎನ್ ಆರ್ ಬಾಗವಾನ ವಂದಿಸಿದರು.