ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಕಳೆದ ಎರಡು ವರ್ಷಗಳಿಂದ ಜನರಿಗೆ ಉತ್ತಮ ಮತ್ತು ಕ್ರಿಯಾಶೀಲ ಆಡಳಿತ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಲಂಚುಗುಳಿತನ, ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಎಂದು ಜೆಡಿಎಸ್ ಪಕ್ಷದ ಹಿರಿಯ ಉಪಾಧ್ಯಕ್ಷ ಧುರೀಣ ಸೋಮನಗೌಡ(ಅಪ್ಪುಗೌಡ) ಪಾಟೀಲ ಹೇಳಿದರು.
ಪಟ್ಟಣದ ತಹಸೀಲ್ದಾರ ಕಚೇರಿಯ ಮುಂಭಾಗ ರಾಜ್ಯ ಸರ್ಕಾರದ ಆಡಳಿತ ವಿಫಲಗೊಂಡಿದ್ದೆ ರಾಜ್ಯಪಾಲರು ಸರ್ಕಾರದ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ ಮನವಿ ಪತ್ರವನ್ನು ತಹಸೀಲ್ದಾರ ಅವರಿಗೆ ಸೋಮವಾರ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು, ಮುಖಂಡರು ರಾಜ್ಯ ಸರ್ಕಾರದ ಸಚಿವರುಗಳ ವಿರುದ್ಧ ಬಹಿರಂಗವಾಗಿ ಸಾಕ್ಷಿ ಸಮೇತ ದಾಖಲೆಗಳೊಂದಿಗೆ ಮಾಧ್ಯಮದಲ್ಲಿ ಆರೋಪಿಸಿದ್ದಾರೆ. ವಸತಿ ಇಲಾಖೆಯು ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಬಡತನದ ಕುಟುಂಬಗಳ ನಿವೇಶನ ಹಾಗೂ ವಸತಿ ರಹಿತ ನೈಜ ಫಲಾನುಭವಿಗಳಿಗೆ ಮೀಸಲಾಗಿರುವ ವಸತಿ ಯೋಜನೆಗಳನ್ನು ಲಂಚ ನೀಡುವವರಿಗೆ ಮಾತ್ರ ನೀಡುತ್ತಿದೆ. ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ ಎಂದರು.
ಜೆಡಿಎಸ್ ತಾಲೂಕಾಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಮಾತನಾಡಿ, ರಾಜ್ಯ ಸರ್ಕಾರ ಇದುವರೆಗೂ ರಾಜ್ಯದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಸರ್ಕಾರದ ಮೇಲೆ ರಾಜ್ಯಪಾಲರು ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ರವಿ ಪಟ್ಟಣಶೆಟ್ಟಿ, ಅಶೋಕ ಗುಳೇದ, ಮುಖಂಡರಾದ ಉಮೇಶ ಹಾರಿವಾಳ, ಮನ್ನಾನ ಶಾಬಾದಿ, ಶರೀಫ ಉಳ್ಳಾಗಡ್ಡಿ, ಸಂಜು ಬಿರಾದಾರ, ಬಾಪುಗೌಡ ಪಾಟೀಲ, ರಫೀಕ ಸಾಠಿ, ಶಾಂತಕ್ಕ ರಾಠೋಡ ಇತರರು ಇದ್ದರು.

