ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹಿಂದು-ಮುಸ್ಲಿಂ ಭಾವೈಕ್ಯತೆ ಸಂಕೇತವಾಗಿರುವ ಮೊಹರಂ ಹಬ್ಬದ ಕೊನೆಯ ದಿನವಾದ ಭಾನುವಾರ ಸಂಜೆ ಅಲಾಯಿ ದೇವರುಗಳ ಹಾಗೂ ಡೋಲಿಗಳ ವಿಸರ್ಜನೆ ಅಂಗವಾಗಿ ಜರುಗಿದ ಮೆರವಣಿಗೆಯಲ್ಲಿ ಜನರು ಶ್ರದ್ಧಾ, ಭಕ್ತಿಯಿಂದ ಭಾಗವಹಿಸಿದರು.
ಪಟ್ಟಣದ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಅಲಾಯಿ ದೇವರಿಗೆ ಶನಿವಾರ ಸಂಜೆ ಜನರು ಸಕ್ಕರಿ, ಮಾದಲಿ ಅರ್ಪಿಸಿದರು. ಭಾನುವಾರ ಸಂಜೆ ಜರುಗಿದ ಅಲಾಯಿ ದೇವರುಗಳ ವಿಸರ್ಜನಾ ಕಾರ್ಯಕ್ರಮದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಹಲಗೆ ನಾದಕ್ಕೆ ಹೆಜ್ಜೆ ಹಾಕಿ ಕುಣಿಯುವ ಮೂಲಕ ಮೆರವಣಿಗೆಯ ಮೆರಗನ್ನು ಹೆಚ್ಚಿಸಿದರು. ಡೋಲಿ, ಅಲಾಯಿ ದೇವರು ಸಾಗುವ ರಸ್ತೆ ಬದಿಯಲ್ಲಿ ಜಮಾಯಿಸಿದ್ದ ಜನರು ಉತ್ತತ್ತಿ, ಶೇಂಗಾ, ಚುನಮರಿ ತೂರಿ ಅಲಾಯಿ ದೇವರುಗಳಿಗೆ ನಮಸ್ಕರಿಸಿದರು.
ಇಂಗಳೇಶ್ವರ ರಸ್ತೆ, ಅಗಸಿ ಒಳಗಡೆ, ಮಹಾರಾಜರ ಮಠದ ಹತ್ತಿರ, ನಾಗೂರ ರಸ್ತೆಯಲ್ಲಿ ಸೇರಿದಂತೆ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಡೋಲಿ ಹಾಗೂ ಅಲಾಯಿ ದೇವರಗಳು ಮೆರವಣಿಗೆ ಮೂಲಕ ಬಸವೇಶ್ವರ ವೃತ್ತದಲ್ಲಿ ಸಮಾಗಮಗೊಂಡವು. ನಂತರ ಬಸವತೀರ್ಥ ಬಾವಿಯಲ್ಲಿ ವಿಸರ್ಜನಾ ಕಾರ್ಯ ನಡೆಯಿತು.
ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಹಿಂದು-ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.
ಮುಂಜಾಗ್ರತಾ ಕ್ರಮವಾಗಿ ಪಿಐ ಗುರುಶಾಂ ದಾಶ್ಯಾಳ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

