ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ೨೦೨೫-೨೬ನೇ ಸಾಲಿನಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಸರ್ಕಾರಿ ಕಾರ್ಯಕ್ರಮಗಳ ಕುರಿತ ಬೀದಿನಾಟಕ, ಜಾನಪದ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲು ಬೀದಿ ನಾಟಕ, ಜಾನಪದ ಸಂಗೀತ ಕಲಾ ತಂಡಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯಿಂದ ೦೩ ಬೀದಿ ನಾಟಕ ಹಾಗೂ ೦೩ ಜಾನಪದ ಸಂಗೀತ ಕಲಾ ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರತಿ ಬೀದಿ ನಾಟಕ ತಂಡದಲ್ಲಿ ೦೮ ಜನ ಕಲಾವಿದರಿರಬೇಕು. ಅದರಲ್ಲಿ ಕಡ್ಡಾಯವಾಗಿ ಇಬ್ಬರು ಮಹಿಳೆಯರು ಹಾಗೂ ಒಬ್ಬರು ಪರಿಶಿಷ್ಟ್ ಜಾತಿ, ಪರಿಶಿಷ್ಟ್ ವರ್ಗಕ್ಕೆ ಸೇರಿದ ಕಲಾವಿದರಿರಬೇಕು. ಪ್ರತಿ ಜಾನಪದ ಸಂಗೀತ ಕಲಾ ತಂಡದಲ್ಲಿ ೦೩ಜನ ಕಲಾವಿದರಿರಬೇಕು. ಇದರಲ್ಲಿ ಕಡ್ಡಾಯವಾಗಿ ಒಬ್ಬರು ಮಹಿಳೆಯರು ಹಾಗೂ ಒಬ್ಬರು ಪರಿಶಿಷ್ಟ್ ಜಾತಿ, ಪರಿಶಿಷ್ಟ್ ವರ್ಗಕ್ಕೆ ಸೇರಿದ ಕಲಾವಿದರಿರಬೇಕು.
ಕಲಾ ತಂಡಕ್ಕೆ ಆಯ್ಕೆ ಮಾಡಲು, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೃಷಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಿ ಆಯ್ಕೆ ಮಾಡಲಾಗುವುದು.
ಆಸಕ್ತ ಅರ್ಹ ಕಲಾ ತಂಡಗಳು ನಿಗದಿತ ಅರ್ಜಿ ನಮೂನೆಯನ್ನು ನಗರದ ಸ್ಟೇಶನ್ ರಸ್ತೆಯ ಕಂದಗಲ್ ಹನುಮಂತರಾಯ ರಂಗಮಂದಿರದ ಆವರಣದಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕಚೇರಿ ವೇಳೆಯಲ್ಲಿ ಪಡೆದು, ಅಗತ್ಯ ದಾಖಲೆಗಳೊಂದಿಗೆ ದಿನಾಂಕ :೨೯-೦೭-೨೦೨೫ರೊಳಗೆ ಸಲ್ಲಿಸಬೇಕು. ಸಲ್ಲಿಸಬೇಕಾದ ದಾಖಲೆಗಳು ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಮೊ: ೮೬೬೦೦೬೮೪೦೬ ಸಂಖ್ಯೆಗೆ ಸಂಪರ್ಕಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

