ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಲೋಕಾಯುಕ್ತ ಸಂಸ್ಥೆಯಲ್ಲಿನ ಅಕ್ರಮಗಳ ತನಿಖೆ, ಉಚ್ಚ ನ್ಯಾಯಾಲಯದ ಮೇಲುಸ್ತುವಾರಿಯಲ್ಲಿ ಸಿಬಿಐ ತನಿಖೆ, ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರ ತಡೆಯುವಲ್ಲಿ ವಿಫಲರಾಗಿರುವ ಸಚಿವ ಆರ್.ಬಿ. ತಿಮ್ಮಾಪುರ ರವರನ್ನು ಸಚಿವ ಸಂಪುಟದಿಂದ ವಜಾ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ವತಿಯಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ವಿಜಯಪುರ ಜಿಲ್ಲಾಧಿಕಾರಿಗಳ ಮುಖಾಂತರ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಆಡಳಿತದಲ್ಲಿನ ಅಕ್ರಮ, ಅವ್ಯವಹಾರ, ಕರ್ತವ್ಯಲೋಪ ಮತ್ತು ಭ್ರಷ್ಟಾಚಾರವನ್ನು ನಿಯಂತ್ರಿಸಬೇಕಾದ ಲೋಕಾಯುಕ್ತ ಸಂಸ್ಥೆಯ ನಿರಂತರವಾಗಿ ಅಕ್ರಮಗಳಲ್ಲಿ ಮತ್ತು ಅವ್ಯವಹಾರಗಳಲ್ಲಿ ಸಿಲುಕುತ್ತಿರುವುದು ದುರದೃಷ್ಟಕರ. ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗುವ ಬಹುತೇಕ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣದೆ ಮುಕ್ತಾಯವಾಗುತ್ತಿವೆ ಮತ್ತು ಸ್ಪಷ್ಟವಾಗಿ ಭ್ರಷ್ಟಾಚಾರವೆಸಗಿರುವ ಪ್ರಕರಣಗಳು ಕೂಡ ವಿಲೇವಾರಿಯಾಗದೆ ದೂಳು ಹಿಡಿಯುತ್ತಿವೆ. ಇದು ಲೋಕಾಯುಕ್ತ ಸಂಸ್ಥೆಯ ಹಳ್ಳ ಹಿಡಿರುವುದನ್ನು ತೋರಿಸುತ್ತದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಾಲು ಸಾಲು ಹಗರಣಗಳು ನಡೆಯುತ್ತಿದ್ದು, ನಿಯಂತ್ರಿಸಲು ಸರ್ಕಾರದ ವತಿಯಿಂದ ಯಾವುದೇ ಕ್ರಮವಾಗುತ್ತಿಲ್ಲ. ಅಬಕಾರಿ ಇಲಾಖೆಯಲ್ಲಿ ಅಸಹ್ಯಕರ ಅವ್ಯವಹಾರ, ಭ್ರಷ್ಟಾಚಾರ ಮತ್ತು ಅಕ್ರಮಗಳು ನಡೆಯುತ್ತಿರುವುದು ಇದರಿಂದ ಸ್ಪಷ್ಟವಾಗಿದೆ. ಇವನ್ನೆಲ್ಲ ನಿಯಂತ್ರಿಸಬೇಕಾದ ಅಬಕಾರಿ ಸಚಿವರಾದ ಆರ್. ಬಿ. ತಿಮ್ಮಾಪುರ ಅವರು ಆರೋಪಿಯೊಂದಿಗೆ ಸಂಪರ್ಕದಲ್ಲಿದ್ದರು ಎನ್ನುವುದು ಗಂಭೀರ ವಿಷಯವಾಗಿದೆ. ಆದ್ದರಿಂದ ಈ ಕೂಡಲೆ ಆರ್. ಬಿ. ತಿಮ್ಮಾಪುರ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು. ಆದ್ದರಿಂದ ಸರ್ಕಾರವು ಈ ಕೂಡಲೆ, ಈ ಪ್ರಕರಣವನ್ನು ತಕ್ಷಣವೇ ಉಚ್ಚ ನ್ಯಾಯಾಲಯದ ಮೇಲುಸ್ತುವಾರಿಯಲ್ಲಿ ಸಿಬಿಐಗೆ ವಹಿಸಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆಗ್ರಹಪಡಿಸಿತು.
ಈ ಸಮಯದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಮಾತನಾಡಿದರು.
ಅವರ ಜೊತೆಯಲಿ ಜಿಲ್ಲಾಧ್ಯಕ್ಷರಾದ ಅಶೋಕ ಜಾದವ, ಗಣಪತಿ ರಾಠೋಡ, ಆನಂದ ಹಡಪದ, ಪ್ರವೀಣ ಕನಸೇ, ವಿಕ್ರಮ ವಾಗಮೋರೆ, ದುರಗಪ್ಪ ಬೂದಿಹಾಳ, ನಬಿ ಹುಣಶ್ಯಾಳ, ಹಣಮಂತ ಮಟ್ಟೆ, ಭಜರಂಗ ಪವಾರ, ಪಿನಿಕ್ಸ್ ಶರಣಪ್ಪ, ಹಣಮಂತ ಮಟ್ಟೇ, ಹಮಿದ ಇನಾಮದಾರ, ಲಕ್ಷ್ಮಣ ಚಡಚಣ, ಅಣ್ಣಾ ಪೂಜಾರಿ, ಪ್ರವೀಣ ರಾಯಗೊಂಡ, ಸಾಗರ ಕುಂಬಾರ, ದೇಶು ಚವ್ಹಾಣ ಇನ್ನಿತರರು ಇದ್ದರು.