ಚಿಂತನೆ
– ಡಾ.ಸರಸ್ವತಿ ಪಾಟೀಲ
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಕಾಲ: ೧೨ನೇ ಶತಮಾನ
ಜನ್ಮ ಸ್ಥಳ: ಇಂಗಳೇಶ್ವರ, ಬಸವನ ಬಾಗೇವಾಡಿ ತಾಲೂಕು, ವಿಜಯಪುರ ಜಿಲ್ಲೆ
ತಂದೆ: ಮಾದರಸ
ತಾಯಿ: ಮಾದಲಾಂಬಿಕೆ
ವೃತ್ತಿ: ಸಮಾಜ ಮುಖಿ, ಬಿಜ್ಜಳನ ಆಸ್ಥಾನದಲ್ಲಿ ಭಂಡಾರಿ, ಪ್ರಧಾನ ದಂಡನಾಯಕ
ಬರೆದ ವಚನಗಳು: ೧೫೦೦ಕ್ಕೂ ಹೆಚ್ಚು
ಅಂಕಿತನಾಮ: ಕೂಡಲಸಂಗಮದೇವ
ಬಸವಣ್ಣನವರ ತಂದೆ ಮಾದರಸ ತಾಯಿ ಮಾದಲಾಂಬಿಕೆ. ಇವರು ಜನಿಸಿದ್ದು ಇಂದಿನ ವಿಜಯಪುರ ಜಿಲ್ಲೆಯ, ಬಾಗೇವಾಡಿ ತಾಲೂಕಿನ ಇಂಗಳೇಶ್ವರದಲ್ಲಿ. ಕಾಲಮಾನ ಹನ್ನೇರಡನೆಯ ಶತಮಾನ. ವೈಶಾಖ ಮಾಸದ ಅಕ್ಷಯ ತೃತೀಯದಂದು (ಏಪ್ರಿಲ ೩, ೧೧೨೮) ರೋಹಿಣಿ ನಕ್ಷತ್ರದಲ್ಲಿ ಎಂದು ಉಲ್ಲೇಖವಿದೆ. ಬಸವಣ್ಣನವರು ವಚನಗಳ ಮೂಲಕ ಸಮಾಜದಲ್ಲಿ ಅರಿವನ್ನು ಹರಡಿದರು. ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ವರ್ಗ ತಾರತಮ್ಯ, ಜಾತಿ ತಾರತಮ್ಯಗಳನ್ನು ಕಿತ್ತೊಗೆದು, ಮೂಢನಂಬಿಕೆಗಳನ್ನು ನಿವಾರಿಸಿ, ಸಮಾಜದಲ್ಲಿ ಸಮಾನತೆಯನ್ನು ಸ್ಥಾಪಿಸಲು ಹೆಣಗಾಡಿದವರು. ಎಲ್ಲರಿಗೂ ಲಿಂಗದೀಕ್ಷೆಯನ್ನು ನೀಡಿ, ದೇವಸ್ಥಾನದ ಪ್ರವೇಶಕ್ಕೆ ಕೆಳಜಾತಿಯವರಿಗಿದ್ದ ಪ್ರವೇಶದ ಕೀಳರಿಮೆಯನ್ನು ಕಿತ್ತೊಗೆದರು. ಅವರು ಕಲ್ಯಾಣದಲ್ಲಿ ಸ್ಥಾಪಿಸಿದ ಅನುಭವ ಮಂಟಪದಲ್ಲಿ ಎಲ್ಲ ಸಾಮಾಜಿಕ, ಆರ್ಥಿಕ ಹಿನ್ನೆಲೆಯನ್ನು ಹೊಂದಿದ ಮಹಿಳೆ ಮತ್ತು ಪುರುಷರಿಗೆ ಪ್ರವೇಶವಿತ್ತು. ಎಲ್ಲರಿಗೂ ಮುಕ್ತವಾಗಿ ಚರ್ಚಿಸಲು ಅವಕಾಶವಿತ್ತು. ಆಧ್ಯಾತ್ಮಕ, ಸಾಮಾಜಿಕ, ಪ್ರಾಪಂಚಿಕ ವಿಷಯಗಳನ್ನು ಇಲ್ಲಿ ಕೂಲಕುಂಶವಾಗಿ ಚರ್ಚಿಸಿ, ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನ ನಡೆಯುತ್ತಿತ್ತು.
ಬಾಗೇವಾಡಿಯ ಇಂಗಳೇಶ್ವರದಲ್ಲಿ ಹುಟ್ಟಿ ಕೃಷ್ಣೆ- ಮಲಬ್ರಭೆಯರ ಸಂಗಮದಲ್ಲಿ ವಿದ್ಯಾಭ್ಯಾಸವನ್ನು ಮಾಡಿದ ಬಸವೇಶ್ವರರು, ಬಿಜ್ಜಳ ರಾಜನ ಮಹಾಮಂತ್ರಿ ಹಾಗೂ ಸೋದರಮಾವ ಬಲದೇವರಸನ ಮಗಳು ಗಂಗಾಂಬಿಕೆಯನ್ನು ಮದುವೆಯಾಗಿ, ಅಕ್ಕ ನಾಗಲಾಂಬಿಕೆ ಹಾಗೂ ಅವಳ ಪತಿ ಶಿವಸ್ವಾಮಿಯೊಡನೆ ಮಂಗಳವೇಡೆ-ಕಲ್ಯಾಣಕ್ಕೆ ಆಗಮಿಸಿದ್ದು ಯೋಗಾಯೋಗವೇ ಸರಿ. ಅಲ್ಲಿ ತಮ್ಮ ಸ್ವಸಾರ್ಥ್ಯದಿಂದ ಬಿಜ್ಜಳನ ಆಸ್ಥಾನದಲ್ಲಿ ಮೊದಲು ಕರಣಿಕನಾಗಿ ಸೇವೆ ಸಲ್ಲಿಸಿ, ರಾಜಭಂಡಾರಿಯಾಗಿ, ಪ್ರಧಾನ ಮಂತ್ರಿಯಾದದ್ದಂತೂ ಅತ್ಯಂತ ಅಪೂರ್ವ ಹಾಗೂ ಮಾರ್ಮಿಕ ಘಟನೆ. ಬಿಜ್ಜಳ ಮಹಾರಾಜನ ಕಿರಿಯ ಸಹೋದರಿಯಂತಿದ್ದ ನೀಲಾಂಬಿಕೆ ಇವರ ವಿದ್ವತ್ತಿಗೆ ಒಲಿದು ಇವರನ್ನು ಮದುವೆಯಾದದ್ದು ಬಸವಣ್ಣನವರ ಜೀವನದಲ್ಲಿ ನಡೆದ ಮಹತ್ವದ ಘಟನೆ.
ಅಧ್ಯಾತ್ಮಿಕ ಹಸಿವು ತುಂಬಲು ಹಾಗೂ ಸಾಮಾಜಿಕ ಪಿಡುಗನ್ನು ನಿವಾರಿಸಲು ಬಸವಣ್ಣನವರು ಸ್ಥಾಪಿಸಿದ ʼಅನುಭವ ಮಂಟಪ” ಒಂದು ವೇದಿಕೆ ಆಯ್ತು. ಇಲ್ಲಿ ಎಲ್ಲಾ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರಿಗೆ ಸಮಾನ ಅವಕಾಶವಿತ್ತು. ಚರ್ಚೆಗಳು ಮುಕ್ತವಾಗಿ ನಡೆಯುತ್ತಿದ್ದವು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳಿದ್ದರೆಂದೂ ೧೯೬೦೦೦ ಶರಣರಿದ್ದರೆಂದೂ ಪುರಾವೆಗಳಿವೆ. ಅಂಬಿಗರ ಚೌಡಯ್ಯ, ಮಾದರ ಚೆನ್ನಯ್ಯ, ಹಡಪದ ಅಪ್ಪಣ್ಣ, ಡೋಹರ ಕಕ್ಕಯ್ಯ, ಒಕ್ಕಲಿಗ ಮುದ್ದಣ್ಣ, ಕಿನ್ನರಿ ಬ್ರಹ್ಮಯ್ಯ, ಕೂಗಿನ ಮಾರಯ್ಯ ಜೇಡರ ದಾಸೀಮಯ್ಯ, ತುರುಗಾಹಿ ರಾಮಣ್ಣ, ನುಲಿಯ ಚಂದಯ್ಯ, ಮೋಳಿಗೆ ಮಹಾದೇವಿ, ಸೂಳೆ ಸಂಕವ್ವೆ, ಆಯ್ದಕ್ಕಿ ಲಕ್ಕಮ್ಮ, ಹಡಪದ ಲಿಂಗಮ್ಮ ಮುಂತಾದ ವಿವಿಧ ಕಾಯಕಗಳನ್ನು ಮಾಡುವ ಶರಣ-ಶರಣೆಯರಿದ್ದರು.
ವಿದ್ವತ್ಪೂರ್ಣ ಗ್ರಂಥಗಳು, ಜನಪದ ನುಡಿಗಳು ಬಸವಣ್ಣನವರೇ ಲಿಂಗಾಯತ ಧರ್ಮದ ಸಂಸ್ಥಾಪಕರೆಂದು ಹೇಳುತ್ತವೆ. ಕಲಚೂರಿ ಶಾಸನಗಳಂಥ ಐತಿಹಾಸಿಕ ಸಾಕ್ಷಗಳು ಬಸವಣ್ಣ ತತ್ವಜ್ಞಾನಿಯೂ, ಸಮಾಜಸುಧಾರಕನೂ ಆಗಿದ್ದು ಅಸ್ತಿತ್ವದಲ್ಲಿದ್ದ ಉತ್ತಮ ಸಂಪ್ರದಾಯಗಳನ್ನು ಸಂಸ್ಕರಿಸಿ, ಸಮಾಜದಲ್ಲಿ ಶಕ್ತಿಯನ್ನು ತುಂಬಿದನು ಎಂದು ಹೇಳುತ್ತವೆ. ಕನ್ನಡದ ಕವಿ ಹರಿಹರನಿಂದ ರಚಿತ (೧೧೬೦) “ಬಸವರಾಜ ರಗಳೆ”ಯಲ್ಲಿ ೨೫ ವಿಭಾಗಗಳು ಲಭ್ಯವಿದೆ ಮತ್ತು ಇವು ಬಸವಣ್ಣನ ಜೀವಿತದ ನಂತರ ಅತ್ಯಂತ ಅಲ್ಪಾವದಿಯಲ್ಲಿ ಬರೆದ ಉಲ್ಲೇಖಗಳಾಗಿವೆ. ನಂತರ ಬಸವಣ್ಣನ ಜೀವನದ ವಿಚಾರಗಳ ಸಂಪೂರ್ಣ ವಿವರ ೧೨ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ “ಬಸವ ಪುರಾಣ” ದಲ್ಲಿ ಕಾಣಸಿಗುತ್ತತೆ.
ಅನುಭವ ಮಂಟಪದಲ್ಲಿ ಜ್ಞಾನ ದಾಸೋಹ ನಡೆಯುತ್ತಿದ್ದಂತೆ ಬಸವಣ್ಣನವರ ಮಹಾಮನೆಯಲ್ಲಿ ಯಾವದೇ ಭೇದ-ಭಾವಗಳಿಲ್ಲದೇ ಅನ್ನ ದಾಸೋಹ ನಡೆಯುತ್ತಿತ್ತು. ಅದರ ಮೇಲ್ವಚಾರಣೆಯನ್ನು ಅಕ್ಕ ನಾಗಲಾಂಬಿಕೆ ಹಾಗೂ ಪತ್ನಿಯರಾದ ಗಂಗಾಂಬಿಕೆ ನೀಲಾಂಬಿಕೆಯರು ಹೊತ್ತಿದ್ದರು.
ದೇವನು ಮನುಷ್ಯನಲ್ಲಿದ್ದಾನೆಯೇ ಹೊರತು ಗುಡಿ-ಗುಂಡಾರದಲ್ಲಿ ಇಲ್ಲ. ಕೆಲಸ ಮಾಡಿಯೇ ಜೀವನ ನಡೆಸಬೇಕು “ಕಾಯಕವೇ ಕೈಲಾಸ” ಎಂಬುದಕ್ಕೆ ಒತ್ತು ಕೊಟ್ಟರು. ಕೆಲಸದಲ್ಲಿ ಮೇಲು ಕೀಳುಗಳಿಲ್ಲ. ಪುರುಷನಂತೆ ಮಹಿಳೆಗೂ ವಿದ್ಯಾಭ್ಯಾಸದ ಹಾಗೂ ಜೀವನ ರೂಪಿಸಿಕೊಳ್ಳುವ ಹಕ್ಕಿದೆ. ಪ್ರಾಣಿಬಲಿ, ವರಧನ ಹರಣ, ಪರಸ್ರ್ತೀ ವ್ಯಾಮೋಹ ಅಪರಾಧಗಳಾಗಿವೆ ಎಂದು ತತ್ವಗಳನ್ನು ರೂಪಿಸಿದವರು ಬಸವಣ್ಣ. ತಮ್ಮ ವಚನಗಳ ಮೂಲಕ ಕಾಯಕವೇ ಕೈಲಾಸ; ದಯವೇ ಧರ್ಮದ ಮೂಲವಯ್ಯ; ಅಯ್ಯ ಎಂದರೆ ಸ್ವರ್ಗ, ಎಲವೋ ಎಂದರೆ ಸರಕ ಎಂದು ಸಾರಿ ಮಾನವತಾವಾದಕ್ಕೆ ಸಾಕಿತ್ಯದ ಸ್ವರ್ಗ ನೀಡಿದರು. ಕನ್ನಡ ಸಾಹಿತ್ಯಕ್ಕೆ ಎಲ್ಲಾ ಶರಣರು ಬರೆದ ವಚನಗಳ ಕೊಡುಗೆ ಅಪಾರ. ವಚನಗಳೆಲ್ಲ ಸರಳಭಾಷೆಯಲ್ಲಿ ಬರೆದಂತವುಗಳಾಗಿ, ಜನ ಸಾಮಾನ್ಯರಿಗೆ ಅರ್ಥ್ಯೆಸುವಂತಾಗಿವೆ. ಇಂದು ಬಸವಣ್ಣನವರು ಬರೆದ ಸುಮಾರು ೧೫೦೦ ವಚನಗಳು ಲಭ್ಯವಿವೆ. ಅನೇಕ ಶರಣರು ಬರೆದ ವಚನಗಳು ಲಭ್ಯವಿವೆ. ಶರಣರ ವಚನಗಳು ಅನುಭಾವದ ನುಡಿಗಳಾಗಿವೆ. ಅವರ ಜೀವನ ಸರ್ವರಿಗೂ ಆದರ್ಶವಾಗಿದೆ “ಮರ್ತ್ಸ ಲೋಕವೆಂಬ ಮಹಾಮನೆ ಹಾಳಾಗಿ ಹೋಗಬಾರದೆಂದು ಹುಟ್ಟಿಬಂದ ಶರಣರು” ಆದರ್ಶದಿಂದ ಬಾಳಿದರು. ಸಮಾಜದಲ್ಲಿಯ ಕೃತಕ ತಾರತಮ್ಯತೆಯನ್ನು ಅಲ್ಲಗಳೆದು ಸಮಾನತೆಯನ್ನು ಸಾರಿದರು ಬಸವಣ್ಣನವರು.
*ಕಾಸಿ ಕಮ್ಮಾರನಾದ*
*ಬೀಸಿ ಮಡಿವಾಳನಾದ*
*ಹಾಸನಿಕ್ಕಿ ಸಾಲಿಗನಾದ*
ಎಂದು ದೈಹಿಕ ಶ್ರಮವನ್ನು ಹೇಳುತ್ತಲೇ “ವೇದವನೋವಿ ಹಾರುವನಾದ” ಎನ್ನುತ್ತ ಬೌದ್ಧಿಕ ಶ್ರಮವನ್ನು ಆ ಸಾಲಿನಲ್ಲಿ ನಿಲ್ಲಿಸುತ್ತಾರೆ. ಇವು ಕ್ರಿಯಾತ್ಮಕ ವ್ಯತ್ಯಾಸಗಳೇ ಹೊರತು ಶ್ರೇಷ್ಠ ಕನಿಷ್ಠಗಳಲ್ಲ ಎಂಬ ಅಭಿಪ್ರಾಯವಿಲ್ಲಿದೆ. ಈ ಬಗೆಯ ವೃತ್ತಿ ತಾರತಮ್ಯದಿಂದಾಗಿ ಬೆಳೆದಿದ್ದ ಜಾತಿ ತಾರತಮ್ಯವನ್ನು
*ಸೆಟ್ಟಿಎಂಬೆನೆ ಸಿರಿಯೊಳನ*
*ಮಾದರನೆಂಬೆನೆ ಚೆನ್ನಯ್ಯನ* ಡೋಹರನೆಂಬೆನೆ ಕಕ್ಕಯ್ಯನ
ಆನು ಹಾರುವನೆಂದರೆ
ಕೂಡಲಸಂಗಯ್ಯ ನಗುವನಯ್ಯ
ಎಂದು ಹೇಳುವ ಮೂಲಕ ಕಾಯಕಕ್ಕೆ ಅಂಟಿದ್ದ ಕುಲಭೇದವನ್ನು ತಾರತಮ್ಯವನ್ನು ಅಳಿಸಿ ಹಾಕಿದರು ಬಸವಣ್ಣನವರು.
ವಚನ ವಿಶ್ಲೇಷಣೆ
ಅಡವಿಯಲ್ಲೊಬ್ಬ ಕಡು ನೀರಡಿಸಿ ,
ಎಡೆಯಲ್ಲಿ ನೀರ ಕಂಡಂತಾಯಿತ್ತಯ್ಯಾ
ಕುರುಡ ಕಣ್ಣ ಪಡೆದಂತೆʼ
ಬಡವ ನಿಧಾನವ ಹಡೆದಂತಾಯಿತ್ತಯ್ಯಾ ,
ನಮ್ಮ ಕೂಡಲಸಂಗನ ಶರಣರ
ಬರವೆನ್ನ ಪ್ರಾಣ ಕಂಡಯ್ಯಾ.
(ಸಮಗ್ರ ವಚನ ಸಂಪುಟ ೧, ವಚನದ ಸಂಖ್ಯೆ ೩೭೬)
ಶರಣರ ಆಗಮನ, ಶರಣರ ಒಡನಾಟ ಬಸವಣ್ನನವರಿಗೆ ಬಹಳ ಅಪ್ಯಾಯಮಾನಿವಾದ ಸಂಗತಿ. ನಿರೀಕ್ಷಣೆಯಲ್ಲಿದ್ದಾಗ ಶರಣರು ಬಂದು ಬಸವಣ್ಣನವರ ಮುಂದೆ ನಿಂತಾಗ, ಅವರ ಕಣ್ಣಿಗೆ ಬಿದ್ದಾಗ, ಅರಣ್ಯದಲ್ಲಿ ನಡೆದು ನಡೆದು, ಸುಸ್ತಾಗಿ ಬಾಯಾರಿಕೆಯಾಗಿ ಕುಸಿದು ಬಿಳುವಂಥ ಸ್ಥಿತಿಯಲ್ಲಿದ್ದಾಗ ನೀರು ಸಿಕ್ಕರೆ ಕಳೆದು ಹೋದ ಜೀವ ಮತ್ತೆ ಮರಳಿ ಬಂದಂತಾಗುತ್ತದೆ. ಕಣ್ಣಿಲದ ಕುರುಡನಿಗೆ ದೃಷ್ಟಿ ಬಂದಾಗ ಲೊಕದಲ್ಲಿದ್ದ ಸಮಸ್ತ ಸೌಂದರ್ಯವನ್ನು ಸವಿಯುವ ಅವಕಾಶ ದೊರಕಿ ಮನಸ್ಸು ತುಂಬಿ ಬರುತ್ತದೆ. ಬಡತನದ ಬೇಗೆಯನ್ನು ಅನುಭವಿಸಿ, ಜೀವದ ಹಂಗನ್ನೇ ತೊರೆದ ಬಡವನಿಗೆ ನಿಕ್ಷೇಪ ದೊರೆತಾಗ ಯಾವ ರೀತಿ ಆನಂದವಾಗುವದೋ ಅದೇ ರೀತಿ ಬಸವಣ್ಣನವರಿಗೆ ಶರಣರ ಆಗಮನ ಅತ್ಯಂತ ಹರ್ಷವನ್ನೀಯುತ್ತದೆ. ತಮ್ಮ ಜೀವನವು ನಿಜ ಶರಣರ ಒಡನಾಟದಲ್ಲಿ ಸಾರ್ಥಕತೆಯನ್ನು ಕಂಡುಕೋಳ್ಳುತ್ತದೆಂದು ಹೇಳುತ್ತಾರೆ.
ಬಸವಣ್ಣನವರು ಇಂಥಹ ಅಮೂಲ್ಯ ವಚನಗಳನ್ನು ಬರೆದಿದ್ದಾರೆ. ಎಲ್ಲದರಲ್ಲೂ ನವೀನ ಅರ್ಥವಿದೆ. ಜೀವನಕ್ಕೆ ದಾರಿದೀಪಗಳಾಗಿವೆ.

