ಲೇಖನ
– ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ
ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು
ದ.ಕ ಜಿಲ್ಲೆ-೫೭೪೧೯೮
ದೂ: ೯೭೪೨೮೮೪೧೬೦
ಉದಯರಶ್ಮಿ ದಿನಪತ್ರಿಕೆ
ಈ ಪ್ರಪಂಚವೇ ಒಂದು ಅದ್ಭುತಗಳ ತವರೂರು ಈ ಭೂಮಿಯಲ್ಲಿ ಹಲವಾರು ವೈವಿಧ್ಯಮಯ ಪ್ರಾಣಿ ಪಕ್ಷಿಗಳು ಸ್ವಚ್ಛಂದವಾಗಿ ಜೀವಿಸುತ್ತಿವೆ. ಕೆಲವೊಂದು ಹೊರ ಜಗತ್ತಿನ ಪರಿಚಯಕ್ಕೆ ಬಂದರೆ ಕೆಲವೊಂದು ಪ್ರಾಣಿ ಪಕ್ಷಿಗಳು ಹಾಗೂ ಅವುಗಳ ವೈಶಿಷ್ಟ್ಯತೆಗಳು ಹೊರ ಪ್ರಪಂಚಕ್ಕೆ ಗೋಚರಿಸುವುದೇ ಇಲ್ಲ. ಅಂತಹ ಪಕ್ಷಿಗಳ ಪೈಕಿ ‘ಅನ್ನಾಸ್ ಹಮ್ಮಿಂಗ್ ಬರ್ಡ್’ ಪಕ್ಷಿಯೂ ಒಂದು. ಹಮ್ಮಿಂಗ್ ಬರ್ಡ್ ಪಕ್ಷಿಗಳ ಮೂಲ ಉತ್ತರ ಅಮೆರಿಕದ ಪಶ್ಚಿಮ ಕರಾವಳಿ ತೀರಗಳು. ಈ ಪಕ್ಷಿಗಳು ತಮ್ಮ ಸಂತಾನಾಭಿವೃದ್ಧಿಯನ್ನು ಕೇವಲ ಉತ್ತರ ಬಾಜಾ ಕ್ಯಾಲಿಫೋರ್ನಿಯಾ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾ ಕರಾವಳಿಗಳಲ್ಲಷ್ಟೇ ಮಾಡುತ್ತವೆ. ‘ಅನ್ನಾಸ್ ಹಮ್ಮಿಂಗ್ ಬರ್ಡ್’ (‘ಕ್ಯಾಲಿಪ್ಟೆ ಅನ್ನಾ’) ಉತ್ತರ ಅಮೆರಿಕಾದ ಹಮ್ಮಿಂಗ್ ಬರ್ಡ್ ಜಾತಿಯಾಗಿದ್ದು, ‘ರಿವೋಲಿಯ ಡಚೆಸ್ ಅನ್ನಾ ಮಸೆನಾ’ ಅವರ ಹೆಸರನ್ನು ಈ ಪಕ್ಷಿಗೆ ಇಡಲಾಗಿದೆ.
ಜೀವಿ ವರ್ಗೀಕರಣ
ಅನ್ನಾ ಹಮ್ಮಿಂಗ್ ಬರ್ಡ್ ಬಗ್ಗೆ ಔಪಚಾರಿಕವಾಗಿ ೧೮೨೯ರಲ್ಲಿ ಫ್ರೆಂಚ್ ಪರಿಸರವಾದಿ ‘ರೆನೆ ಲೆಸನ್’ ಅವರು ಹಿಸ್ಟೊಯಿರ್ ನ್ಯಾಚುರಲ್ ಡೆಸ್ ಓಸಿಯಾಕ್ಸ್ ಮೌಚೆಸ್‌ನಲ್ಲಿ ವಿವರಿಸಿದರು. ಈ ಪಕ್ಷಿಯನ್ನು ಪ್ರಾರಂಭದಲ್ಲಿ ‘ಓರ್ನಿಸ್ಮಾö್ಯ’ ಕುಲದಲ್ಲಿ ಗುರುತಿಸಲಾಗಿತ್ತು ಮತ್ತು ಈ ಹೆಸರು ‘ಓರ್ನಿಸ್ಮಾö್ಯ ಅನ್ನಾ’ ಎಂಬ ದ್ವಿಪದ ಹೆಸರಿನಿಂದ ಬಂದಿತ್ತು. ಅನ್ನಾ ಹಮ್ಮಿಂಗ್ ಬರ್ಡನ್ನು ಪ್ರಸ್ತುತ ‘ಕ್ಯಾಲಿಪ್ಟೆ’ ಕುಲದಲ್ಲಿ ಗುರುತಿಸಲಾಗಿದ್ದು, ಇದನ್ನು ೧೮೫೬ರಲ್ಲಿ ಇಂಗ್ಲಿಷ್ ಪಕ್ಷಿಶಾಸ್ತçಜ್ಞ ‘ಜಾನ್ ಗೌಲ್ಡ್’ ಪರಿಚಯಿಸಿದರು. ಗೌಲ್ಡ್ ಅವರು ಇದರ ಕುಲದ ಹೆಸರಿನ ಮೂಲವನ್ನು ವಿವರಿಸಲಿಲ್ಲ. ‘ಕ್ಯಾಲಿಪ್ಟೆ’ ಅಂದರೆ ಬಹುಶಃ ಪ್ರಾಚೀನ ಗ್ರೀಕ್ ಶಬ್ದವಾದ ‘ಮಹಿಳೆಯ ಮುಸುಕು’ ಅಥವಾ ‘ತಲೆ ಉಡುಗೆ’ ಎಂಬ ಪದದಿಂದ ಬಂದಿದೆ ಎಂದು ಅಂದಾಜಿಸಲಾಗಿದೆ. ರಿವೊಲಿಯ ೩ನೇ ಡ್ಯೂಕ್ ಆಗಿದ್ದ ಪಕ್ಷಿವಿಜ್ಞಾನಿ ಫ್ರಾಂಕೋಯಿಸ್ ವಿಕ್ಟರ್ ಮಸ್ಸೆನಾ ಅವರನ್ನು ವಿವಾಹವಾದ ಅನ್ನಿ ಡಿ ಎಸ್ಲಿಂಗ್ ಅವರ ಗೌರವಾರ್ಥ ‘ಅನ್ನಾ’ ಎಂಬ ಪದವನ್ನು ಈ ಪಕ್ಷಿಯ ಕುಲಕ್ಕೆ ಇಡಲಾಯಿತು.
ಪ್ರತಿಫಲಿಸುವ ವರ್ಣವೈವಿಧ್ಯ:
ಅನ್ನಾ ಹಮ್ಮಿಂಗ್ ಬರ್ಡ್ ೯.೯ ರಿಂದ ೧೦.೯ ಸೆಂ.ಮೀ ಉದ್ದವಿದ್ದು ೧೨ ಸೆಂ.ಮೀ ಉದ್ದದ ರೆಕ್ಕೆಗಳು ಮತ್ತು ೨.೮ ರಿಂದ ೫.೭ಗ್ರಾಂನಷ್ಟು ಕಡಿಮೆ ತೂಕವನ್ನು ಹೊಂದಿರುತ್ತವೆ. ಈ ಪಕ್ಷಿಯನ್ನು ವರ್ಣವೈವಿಧ್ಯತೆಯ ಸಮ್ಮಿಶ್ರಣ ಎನ್ನಬಹುದು. ಇವು ಕಂಚು ಮತ್ತು ಹಸಿರು ಬಣ್ಣದ ಬೆನ್ನು, ಮಸುಕಾದ ಬೂದು ಎದೆ, ಹೊಟ್ಟೆ ಮತ್ತು ಹಸಿರು ಪಾರ್ಶ್ವವನ್ನು ಹೊಂದಿರುತ್ತವೆ. ಇವುಗಳ ಕೊಕ್ಕುಗಳು ಉದ್ದ, ನೇರ ಮತ್ತು ತೆಳ್ಳಗಿರುತ್ತವೆ. ವಯಸ್ಕ ಗಂಡು ಪಕ್ಷಿಗಳು ಹಲವು ಬಣ್ಣಗಳ ಮಿಶ್ರಣದಿಂದ ಕೂಡಿದ ಕಡುಗೆಂಪು ಮತ್ತು ಕೆಂಪು ಬಣ್ಣವನ್ನು ಹೊಂದಿದ್ದು, ಕೆಂಪು ಮತ್ತು ಗುಲಾಬಿ ಬಣ್ಣದ ಗಂಟಲು ಮತ್ತು ಎದೆಯ ಮೇಲ್ಭಾಗದಲ್ಲಿ ಗರಿಗಳ ತೇಪೆ ಮತ್ತು ಕಿರೀಟ ಇರುತ್ತದೆ. ಇವುಗಳಿಗೆ ಮಂದ ಕಂದು ಅಥವಾ ಬೂದು ಮತ್ತು ಗಾಢವಾದ, ತುಸು ಕವಲೊಡೆದ ಬಾಲವಿರುತ್ತದೆ.
ಗಂಟಲು ಮತ್ತು ಎದೆಯ ಮೇಲ್ಭಾಗದ ಗರಿಗಳ ತೇಪೆಯ ಬಣ್ಣವು ಪ್ರತಿಕ್ಷಣವೂ ಬದಲಾಗುವುದು ಗಂಡು ಹಮ್ಮಿಂಗ್ ಬರ್ಡ್ಗಳ ವಿಶೇಷತೆಯಾಗಿದೆ. ಸೂರ್ಯನ ಬೆಳಕಿಗೆ ಈ ಪಕ್ಷಿಯು ತನ್ನ ಕತ್ತನ್ನು ಅಲ್ಲಾಡಿಸುವಾಗ ಕತ್ತಿನ ಗರಿಗಳ ತೇಪೆಯು ವಿವಿಧ ಬಣ್ಣಗಳನ್ನು ಪ್ರತಿಫಲಿಸುತ್ತದೆ. ಗಂಡು ಪಕ್ಷಿಯು ಕೆಂಪು ಕಿರೀಟ ಹೊಂದಿರುವ ಏಕೈಕ ಉತ್ತರ ಅಮೆರಿಕಾದ ಹಮ್ಮಿಂಗ್ ಬರ್ಡ್ ಇದಾಗಿದೆ. ಹೆಣ್ಣು ಮತ್ತು ಹರೆಯದ ಗಂಡು ಹಕ್ಕಿಗಳು ಮಂದ ಹಸಿರು ಕಿರೀಟವನ್ನು ಹೊಂದಿರುತ್ತವೆ. ಕೆಲವು ಕೆಂಪು ವರ್ಣವೈವಿಧ್ಯದೊಂದಿಗೆ ಅಥವಾ ಇಲ್ಲದೆಯೇ ಬೂದು ಗಂಟಲು, ಬೂದು ಎದೆ ಮತ್ತು ಹೊಟ್ಟೆ ಮತ್ತು ಬಿಳಿಯೊಂದಿಗೆ ಕಪ್ಪು, ದುಂಡು ಬಾಲವನ್ನು ಹೊಂದಿರುತ್ತವೆ.
ಗಂಡು ಪಕ್ಷಿಗಳು ಸದಾ ಹಾರಾಡುತ್ತಿರುವ ಸ್ಥಿತಿಯಲ್ಲಿ ಕಾಣಸಿಕ್ಕರೆ ಹೆಣ್ಣು ಪಕ್ಷಿಗಳು ಬಿಲ್ಲುಗಳಲ್ಲಿ ಅಥವಾ ಗಿಡಗಳಲ್ಲಿ ತೂಗಾಡುತ್ತಾ ಇರುವಂತೆ ನೋಡಲು ಸಿಗುತ್ತವೆ. ಇದರ ಬೆನ್ನು ಕಂಚು ಮಿಶ್ರಿತ ಹಸಿರು ಬಣ್ಣವಿದ್ದು, ತೆಳು ಬೂದು ಬಣ್ಣದ ಎದೆ ಮತ್ತು ಹೊಟ್ಟೆ ಹಾಗೂ ಹಸಿರು ಪಕ್ಕೆಗಳನ್ನು ಹೊಂದಿದೆ. ಇದರ ಕೊಕ್ಕು ಅತ್ಯಂತ ಉದ್ದ ಹಾಗೂ ನೀಳವಾಗಿ, ನೇರವಾಗಿ ಚೂಪಾಗಿರುತ್ತದೆ. ಗಂಡು ಪ್ರಬುದ್ಧ ಗಂಡು ಪಕ್ಷಿಗಳು ವರ್ಣವೈವಿಧ್ಯತೆಯ ಪುಕ್ಕಗಳು ಅತ್ಯಂತ ಆಕರ್ಷಣೀಯ ಆಗಿದ್ದು ಪ್ರತಿಕ್ಷಣಕ್ಕೂ ಇವುಗಳು ಗೋಸುಂಬೆ ಅಥವಾ ಊಸರವಳ್ಳಿಯಂತೆ ತಮ್ಮ ಬಣ್ಣವನ್ನು ಬದಲಾಯಿಸುತ್ತಾ ಇರುತ್ತವೆ. ಪ್ರಬುದ್ಧ ಗಂಡು ಪಕ್ಷಿಗಳ ಮೈ ಬಣ್ಣವೂ ಕಡುಕೆಂಪು ಬಣ್ಣದಿಂದ ಕೆನ್ನೇರಳೆ ಬಣ್ಣವನ್ನು ಹೊಂದಿ ಗಾಢ ಕೆಂಪು ಮಿಶ್ರಿತ ಗುಲಾಬಿ ಬಣ್ಣದ ಮುಕುಟವನ್ನು ಹೊಂದಿರುತ್ತವೆ. ಸೂರ್ಯನ ಬೆಳಕಿನ ಕಿರಣಗಳು ಈ ಪಕ್ಷಿಯ ಮೇಲೆ ಬೀಳದೆ ಇದ್ದಲ್ಲಿ ಸಾಮಾನ್ಯವಾಗಿ ಈ ಪಕ್ಷಿ ನೋಡಲು ಕಂದು ಅಥವಾ ಬೂದು ಬಣ್ಣದಿಂದ ಗೋಚರಿಸುತ್ತದೆ. ಇವುಗಳು ತೆಳುವಾದ ಕವಲೊಡೆದ ಬಾಲಗಳನ್ನು ಹೊಂದಿರುತ್ತದೆ. ಹೆಣ್ಣು ಪಕ್ಷಿಗಳು ಗಂಡಿಗಿಂತ ಗಾತ್ರದಲ್ಲಿ ಚಿಕ್ಕದಾಗಿದ್ದು ಅಷ್ಟು ಆಕರ್ಷಕವಲ್ಲ.

ಪರಾಗಸ್ಪರ್ಶಕ ಪಕ್ಷಿ
ಅನ್ನಾ ಹಮ್ಮಿಂಗ್ ಬರ್ಡ್ ಹೂವುಗಳಿಗೆ ತಮ್ಮ ಚೂಪು ಕೊಕ್ಕನ್ನು ನುಗ್ಗಿಸಿ ಉದ್ದ ನಾಲಿಗೆಯಿಂದ ಮಕರಂದ ಹೀರುವಾಗ ಪರೋಕ್ಷವಾಗಿ ಪರಾಗಸ್ಪರ್ಶ ಮಾಡುತ್ತದೆ. ಇವು ಹೂವಿನಿಂದ ಹೂವಿಗೆ ಮಕರಂದಕ್ಕಾಗಿ ಹಾರುವಾಗ ತಮ್ಮ ಕೊಕ್ಕು ಮತ್ತು ಗರಿಗಳಿಗೆ ಪರಾಗವನ್ನು ಅಂಟಿಸಿಕೊಳ್ಳುವ ಸ್ಥಾಯೀವಿದ್ಯುತ್ತಿನ ವಿದ್ಯುದಾವೇಶವನ್ನು ಉತ್ಪತ್ತಿ ಮಾಡುತ್ತವೆ. ಹೀಗೆ ಹಾರುತ್ತಾ ಇವು ಪರಾಗದ ಧಾನ್ಯಗಳನ್ನು ದಿನಕ್ಕೆ ನೂರಾರು ಹೂವುಗಳಿಗೆ ವರ್ಗಾಯಿಸುತ್ತವೆ. ಇವು ಶುಷ್ಕ ವಾತಾವರಣದಲ್ಲಿ ಹಾರುವಾಗ ತಮ್ಮ ರೆಕ್ಕೆಗಳ ಗರಿಗಳಿಗೆ ಅಂಟಿರುವ ಪರಾಗ ಅಥವಾ ಕೊಳೆಯನ್ನು ತೆಗೆಯಲು ತಮ್ಮ ದೇಹವನ್ನು ಪ್ರತಿ ನಿಮಿಷಕ್ಕೆ ೫೫ ಬಾರಿ ವಿಶಿಷ್ಟವಾಗಿ ಅಲುಗಾಡಿಸುತ್ತವೆ ಇವುಗಳು ಹೂವಿನ ಮಕರಂದ ಜೊತೆಗೆ ತಮ್ಮ ಆಹಾರವಾಗಿ ಹಾರುವ ಕೀಟಗಳು, ಹುಳು ಹುಪ್ಪಟೆ ಮತ್ತು ಸಣ್ಣ ಸರೀಸೃಪಗಳನ್ನು ತಿನ್ನುತ್ತವೆ.
ಈ ಪಕ್ಷಿಗಳು ಉತ್ತರ ಅಮೆರಿಕಾದ ಪಶ್ಚಿಮ ಕರಾವಳಿಯಲ್ಲಿ ಹೇರಳವಾಗಿ ಕಾಣಸಿಗುತ್ತವೆ. ೨೦ನೇ ಶತಮಾನದ ಆರಂಭದಲ್ಲಿ, ಈ ಪಕ್ಷಿಗಳು ಉತ್ತರ ಬಾಜಾ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಮಾತ್ರ ಇದ್ದವು. ಪೆಸಿಫಿಕ್ ಕರಾವಳಿ ಮತ್ತು ಒಳನಾಡಿನ ಮರುಭೂಮಿಗಳ ವಸತಿ ಪ್ರದೇಶಗಳಲ್ಲಿ ಅಲಂಕಾರಿಕ ಸಸ್ಯಗಳು, ಮಕರಂದ ಇರುವ ಹೂವಿನ ಗಿಡಗಳು ಮತ್ತು ಗೂಡುಕಟ್ಟುವ ಸ್ಥಳಗಳು ಇವುಗಳಿಗೆ ದೊರೆತದ್ದರಿಂದ ಅವುಗಳ ಸಂತಾನೋತ್ಪತ್ತಿಗೆ ಪೂರಕ ವಾತಾವರಣ ದೊರೆತು ಅವುಗಳ ಆವಾಸಸ್ಥಾನ ವಿಸ್ತರಿಸಿತು. ಇವು ಚಳಿಗಾಲದಲ್ಲಿ ಉತ್ತರ ಅಕ್ಷಾಂಶ ಪ್ರದೇಶಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಇವು ಶೀತ ತಾಪವನ್ನು ಸಹಿಸಿಕೊಂಡು, ಚಳಿಗೆ ದೇಹದ ಸಕ್ಕರೆಯ ಅಂಶವನ್ನು ಕೊಬ್ಬಾಗಿ ಪರಿವರ್ತನೆ ಮಾಡುವುದರಿಂದ ಹಗಲಿನ ವೇಳೆ ಕ್ರಮೇಣ ತೂಕವನ್ನು ಗಳಿಸಿಕೊಳ್ಳುತ್ತವೆ.
ಈ ಪಕ್ಷಿಗಳು ವೈವಿಧ್ಯಮಯ ಮೈಬಣ್ಣದ ಕಾರಣದಿಂದಾಗಿ ಹಾಗೂ ಅವುಗಳು ಬಣ್ಣ ಬದಲಾಯಿಸುವ ವಿಶೇಷ ಗುಣದಿಂದಾಗಿ ಇವುಗಳ ಮಾರುಕಟ್ಟೆಯ ಬೆಲೆ ಇಪ್ಪತ್ತೈದು ಲಕ್ಷಕ್ಕೂ ಹೆಚ್ಚಿದೆ ಎನ್ನಲಾಗಿದೆ. ಈ ಪಕ್ಷಿಗಳನ್ನು ಪ್ರಪಂಚದ ಅತ್ಯದ್ಭುತ ಪಕ್ಷಿಗಳ ಪೈಕಿ ಒಂದಾಗಿದ್ದು, ಇವುಗಳು ಬಣ್ಣ ಬದಲಾಯಿಸುವಿಕೆಯ ಪರಿಪೂರ್ಣ ಛಾಯಾಚಿತ್ರ ತೆಗೆಯಲು ಹತ್ತೊಂಬತ್ತು ಛಾಯಾಗ್ರಾಹಕರು ಸುಮಾರು ಅರುವತ್ತೆರಡು ದಿನಗಳನ್ನು ತೆಗೆದುಕೊಂಡಿದ್ದರು. (ಈ ವೀಡಿಯೋ ಗೂಗಲ್‌ನಲ್ಲಿ ಲಭ್ಯವಿದೆ.) ೨೦೨೧ರ ಅಧ್ಯಯನದ ಪ್ರಕಾರ ಪಶ್ಚಿಮ ಅಮೇರಿಕಾ ಮತ್ತು ಕೆನಡಾದಲ್ಲಿ ೮ ಮಿಲಿಯನ್ ಅನ್ನಾ ಹಮ್ಮಿಂಗ್ ಬರ್ಡ್ಗಳಿವೆ. ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ ಸಂಸ್ಥೆಯು ಈ ಹಕ್ಕಿಗಳನ್ನು ವಿನಾಶದ ಅಂಚಿನಲ್ಲಿರುವ ಜೀವವೈವಿಧ್ಯವೆಂದು ಗುರುತಿಸಿದೆ. ಪ್ರಸ್ತುತ ಹವಾಮಾನ ವೈಪರೀತ್ಯದಿಂದ ಬಯಲು ಸೀಮೆಯಲ್ಲಿ ಹೆಚ್ಚುತ್ತಿರುವ ಉಷ್ಣತೆಯಿಂದ ಈ ಹಕ್ಕಿಗಳು ತಮ್ಮ ಆವಾಸವನ್ನು ಹೆಚ್ಚಿನ ಎತ್ತರದ ಕ್ಯಾಲಿಫೋರ್ನಿಯಾದ ಪರ್ವತ ಭೂಪ್ರದೇಶಗಳಾದ ಸಿಯೆರಾ, ನೆವಾಡಾ ಮುಂತಾದ ತಂಪಾದ ಪರಿಸರಕ್ಕೆ ಬದಲಾಯಿಸಿಕೊಂಡಿವೆ.
ಜಡತ್ವ ತತ್ವಕ್ಕೆ ಅಂಟಿಕೊಳ್ಳುವ ಪಕ್ಷಿ
ತಮ್ಮ ದೇಹದ ಕೊಬ್ಬಿನ ಅಸಮರ್ಪಕ ಸಂಗ್ರಹ ಮತ್ತು ದೇಹದಲ್ಲಿ ಸಾಕಷ್ಟು ಪುಕ್ಕಗಳನ್ನು ಹೊಂದಿರುವ ಅನ್ನಾ ಹಮ್ಮಿಂಗ್ ಬರ್ಡ್ಗಳು ತಮ್ಮ ಚಯಾಪಚಯ ಕ್ರೀಯೆಯ ವೇಗವನ್ನು ಕಡಿಮೆ ಮಾಡುವ ಮೂಲಕ ಮತ್ತು ಜಡತ್ವ ಸ್ಥಿತಿಯನ್ನು ಪ್ರವೇಶಿಸುವ ಮೂಲಕ ೦ಲಿಅ ಗಿಂತ ಕಡಿಮೆ ಉಷ್ಣತೆಯಲ್ಲೂ ಇವು ಬದುಕುತ್ತವೆ. ಪರ್ವತದ ಪ್ರದೇಶಗಳ ಶೀತ ವಾತಾವರಣದಲ್ಲಿ ಇವು ಹೆಚ್ಚಾಗಿ ಜಡತ್ವ ಸ್ಥಿತಿಯನ್ನು ಬಳಸುತ್ತವೆ ಎಂದು ಅಧ್ಯಯನಗಳು ಹೇಳಿವೆ. ಇವು ತೂಗಾಡಿಕೊಂಡು ಹಾರುವಾಗ ತಮ್ಮ ಬಲಿಷ್ಠ ಮತ್ತು ದೊಡ್ಡ ಎದೆಯ ಸ್ನಾಯುಗಳಿಂದ ಹಿಡಿದಿಟ್ಟಿರುವ ರೆಕ್ಕೆಗಳನ್ನು ಬಡಿಯುವಾಗ ಮೋಟಾರು ವಾಹನದದಂತೆ ಆವರ್ತಿತ ಸದ್ದು ಬರುತ್ತದೆ. ಈ ಪಕ್ಷಿಯ ಹಾರಾಟಕ್ಕೆ ಶಕ್ತಿ ನೀಡುವ ಎದೆಯ ಸ್ನಾಯುಗಳು ವೇಗವಾಗಿ ಪ್ರತಿಕ್ರಿಯಿಸುವ ಮತ್ತು ಆಯಾಸ ನಿರೋಧಕ ವೇಗದ ‘ಗ್ಲೆöÊಕೋಲೈಟಿಕ್ ಫೈಬರ್’ಗಳಿಂದ ಪ್ರತ್ಯೇಕವಾಗಿ ಸಂಯೋಜಿಸಲ್ಪಟ್ಟಿವೆ.
ಪ್ರಣಯದ ಸಂದರ್ಭ ಹಾಡುತ್ತದೆ:
ಗಂಡು ಅನ್ನಾ ಹಮ್ಮಿಂಗ್ ಬರ್ಡ್ ಹೆಣ್ಣು ಹಕ್ಕಿಯೊಂದಿಗಿನ ಪ್ರಣಯದ ಸಂದರ್ಭ ಭಿನ್ನವಾಗಿ ಹಾಡುತ್ತದೆ. ಇದರ ಧ್ವನಿಯು ಮೆದುವಾಗಿದ್ದು, ಕೆಲವೊಮ್ಮೆ ಕೀರಲು ಧ್ವನಿಯಲ್ಲಿ ೧೦ ಸೆಕೆಂಡುಗಳ ಕಾಲ ಒಂದೇ ಧ್ವನಿಯಲ್ಲಿ ಹಾಡುತ್ತವೆ. ಸಂತಾನವೃದ್ಧಿಯ ಅವಧಿಯಲ್ಲಿ ಗಂಡು ಹಕ್ಕಿಗಳು ತಮ್ಮ ಭೂಪ್ರದೇಶಗಳ ಮೇಲೆ ಡೈವ್ ಮಾಡುತ್ತಾ ವೈಮಾನಿಕ ಪ್ರದರ್ಶನ ನೀಡುತ್ತವೆ. ಒಂದು ಹೆಣ್ಣು ಹಕ್ಕಿಯು ಗಂಡು ಹಕ್ಕಿಯ ಪ್ರದೇಶದ ಮೇಲೆ ಹಾರಿದಾಗ, ಗಂಡು ಹಕ್ಕಿಯು ಸುಮಾರು ೧೩೦ ಅಡಿ ಎತ್ತರಕ್ಕೆ ಏರಿ ನಂತರ ಹೆಣ್ಣು ಹಕ್ಕಿಯ ಮೇಲೆ ಧುಮುಕುತ್ತದೆ. ಗಂಡು ಹಕ್ಕಿಯು ಹೆಣ್ಣು ಹಕ್ಕಿಯ ಸಮೀಪ ಬರುತ್ತಿದ್ದಂತೆ ಅದು ಸರಾಸರಿ ೨೭ ಮೀ/ಸೆ ವೇಗವನ್ನು ತಲುಪುತ್ತದೆ. ಹೆಣ್ಣು ಹಕ್ಕಿಯ ಸಮೀಪ ತಲುಪುವಾಗ ಗಂಡು ೨೩ ಮೀ/ಸೆ ವೇಗದಲ್ಲಿ ಚಲಿಸುತ್ತಾ ತನ್ನ ಬಾಲದ ಗರಿಗಳಿಂದ ವಿಭಿನ್ನವಾದ ಶ್ರವ್ಯ ಧ್ವನಿಯನ್ನು ಉತ್ಪಾದಿಸುತ್ತದೆ.
ಗೂಡುಕಟ್ಟುವಿಕೆ ಮತ್ತು ಪೋಷಣೆ
ಹೆಣ್ಣು ಹಕ್ಕಿಗಳು ತೆರೆದ ಕಾಡುಗಳು, ಪೊದೆಸಸ್ಯ ಪ್ರದೇಶಗಳು, ಪರ್ವತ ಹುಲ್ಲುಗಾವಲುಗಳು ಪೊದೆ ಅಥವಾ ಮರ, ಬಳ್ಳಿಗಳು, ತಂತಿಗಳು ಅಥವಾ ಇತರ ಕೃತಕ ತಲಾಧಾರಗಳನ್ನು ಬಳಸಿ ಗೂಡು ಕಟ್ಟುತ್ತದೆ. ಇವು ಸಸ್ಯದ ನಾರುಗಳು, ಪಕ್ಷಿಗಳ ಗರಿಗಳು ಮತ್ತು ಪ್ರಾಣಿಗಳ ಕೂದಲಿನಿಂದ ೩.೮ ರಿಂದ ೫.೧ ಸೆಂ.ಮೀ ವ್ಯಾಸದ ಗೂಡನ್ನು ನಿರ್ಮಿಸುತ್ತವೆ. ಗೂಡಿನ ಹೊರಭಾಗವನ್ನು ಕಲ್ಲುಹೂವುಗಳ ದಳಗಳು ಮತ್ತು ಸಸ್ಯದ ಅವಶೇಷಗಳು ಮತ್ತು ಬಣ್ಣದ ಹಾಳೆಗಳು ಮತ್ತು ಸಿಗರೇಟ್ ಪೇಪರ್‌ನಿಂದ ಮರೆಮಾಚುತ್ತದೆ. ಇವು ಭೌಗೋಳಿಕ ಸ್ಥಳ ಮತ್ತು ಹವಾಮಾನಕ್ಕೆ ಅನುಗುಣವಾಗಿ ಡಿಸೆಂಬರ್ ಮಧ್ಯದಿಂದ ಆರಂಭಿಸಿ ಜೂನ್ ಅಂತ್ಯದವರೆಗೆ ಗೂಡುಕಟ್ಟುತ್ತವೆ. ಇವು ಮುಚ್ಚಿದ ಗೂಡಿನಲ್ಲಿ ಒಮ್ಮೆಗೆ ಎರಡು ಮೊಟ್ಟೆಗಳನ್ನಿಟ್ಟು ಕಾವು ಕೊಟ್ಟು ಗಂಡಿನ ಸಹಾಯವಿಲ್ಲದೇ ಮರಿಗಳನ್ನು ಪೋಷಿಸುತ್ತದೆ. ಇವುಗಳನ್ನು ಬ್ರಿಟಿಷ್ ಕೊಲಂಬಿಯಾದ ವ್ಯಾಂಕೋವರ್ ನಗರದ ಅಧಿಕೃತ ಪಕ್ಷಿಯೆಂದು ಘೋಷಿಸಲಾಗಿದೆ. ಪ್ರಕೃತಿಯು ಅನೇಕ ಜೀವವೈವಿಧ್ಯಗಳು ಮತ್ತು ವಿಶೇಷಗಳನ್ನು ಸೃಷ್ಟಿಸಿದೆ. ಆದರೆ ಅವುಗಳನ್ನು ಉಳಿಸಿಕೊಂಡು ಹೋಗಬೇಕಾದ್ದು ನಮ್ಮ ಆದ್ಯ ಕರ್ತವ್ಯವಾಗಿದೆ.
ಫೋಟೋ ಕೃಪೆ: https://www.allaboutbirds.org/guide/Annas_Hummingbird/photo-gallery/303891031
