ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರ ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಏಪ್ರಿಲ್ ೩೦ರ ಅಕ್ಷಯ ತೃತೀಯ ದಿನದಂದು ಜಿಲ್ಲೆಯಲ್ಲಿ ಸಾಮೂಹಿಕ ವಿವಾಹಗಳು ಹಾಗೂ ವೈಯಕ್ತಿಕ ವಿವಾಹಗಳು ಹೆಚ್ಚಾಗಿ ಆಯೋಜನೆಯಾಗುವ ಸಂಭವವಿದ್ದು, ಈ ಸಂದರ್ಭಗಳಲ್ಲಿ ಅಪ್ರಾಪ್ತ ವಯಸ್ಸಿನವರ ವಿವಾಹಗಳು ಜರುಗುವ ಸಾಧ್ಯತೆ ಇರುವುದರಿಂದ, ಬಾಲ್ಯ ವಿವಾಹ ನಿಷೇಧ ಕಾಯ್ದೆ-೨೦೦೬ ಮತ್ತು ಕರ್ನಾಟಕ ತಿದ್ದುಪಡಿ ಕಾಯ್ದೆ-೨೦೧೬ರ ಸೆಕ್ಷನ್ ೧೩(೪)ರಂತೆ ವಿವಾಹಗಳನ್ನು ತಡೆಯುವ ಅಧಿಕಾರವಿರುವುದರಿಂದ ಜಿಲ್ಲಾ, ತಾಲೂಕು, ವಾರ್ಡ ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಬಾಲ್ಯ ವಿವಾಹ ನಿಷೇಧಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬಾಲ್ಯವಿವಾಹ ನಡೆಯದಂತೆ ನಿಗಾವಹಿಸುವಂತೆ ಅವರು ಸೂಚನೆ ನೀಡಿದ್ದಾರೆ.
ಸಾರ್ವಜನಿಕರು ಸಹ ಬಾಲ್ಯವಿವಾಹ ತಡೆಗಟ್ಟಲು ಸಹಕರಿಸಬೇಕು. ಬಾಲ್ಯವಿವಾಹ ನಡೆಯುವ ಮಾಹಿತಿ ದೊರೆತಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ ೧೦೯೮ ಅಥವಾ ೧೧೨ಗೆ ಕರೆ ಮಾಡಿ ದೂರು ನೀಡಿದರೆ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಟ್ಟು ಬಾಲ್ಯ ವಿವಾಹ ತಡೆಗಟ್ಟಲು ಕ್ರಮ ವಹಿಸಲಾಗುವುದು ತಿಳಿಸಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

