ವಿಜಯಪುರ: ಜಿಲ್ಲಾಡಳಿತದ ವತಿಯಿಂದ ಇದೇ ಅಕ್ಟೋಬರ್ ೨ರಂದು ಮಹಾತ್ಮ ಗಾಂಧೀಜಿ ಹಾಗೂ ಲಾಲಬಹಾದ್ದೂರ ಶಾಸ್ತ್ರಿ ಜಯಂತಿ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣ ಹಾಗೂ ಅಚ್ಚುಕಟ್ಟಾಗಿ ಆಯೋಜಿಸಲು ನಿರ್ಧರಿಸಲಾಯಿತು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಸಿದ್ಧತಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಮಹಾತ್ಮ ಗಾಂಧೀ ಜಯಂತಿ ಅಂಗವಾಗಿ ಅಕ್ಟೋಬರ್ ೧ರಂದು ಬೆಳಿಗ್ಗೆ ೭ ಗಂಟೆಗೆ ನಗರದ ರಾಣಿ ಬಗೀಚ ಹಾಗೂ ಕಣಕಿ ಬಜಾರದಿಂದ ಅಂಬೇಡ್ಕರ್ ವೃತ್ತದವರೆಗೆ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ಅಕ್ಟೋಬರ್ ೨ರಂದು ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ನಗರದ ಗಾಂಧಿವೃತ್ತದಲ್ಲಿ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಸೈನಿಕ್ ಶಾಲೆ ಹತ್ತಿರವಿರುವ ಲಾಲಬಹಾದ್ದೂರ ಶಾಸ್ತ್ರೀಜಿ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಬೆಳಿಗ್ಗೆ ೮ ಗಂಟೆ ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಗಾಂಧಿಭವನದಲ್ಲಿ ಈರ್ವರ ಮಹನೀಯರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ವೇದಿಕೆ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲಬಹಾದ್ದೂರ ಶಾಸ್ತ್ರಿ ಭಾವಚಿತ್ರಗಳಿಗೆ ಪುಷ್ಪನಮನ, ಸರ್ವಧರ್ಮ ಪ್ರಾರ್ಥನೆ, ನಾಡಗೀತೆ, ಉಪನ್ಯಾಸ ಕಾರ್ಯಕ್ರಮ, ವಿವಿಧ ಶಾಲಾ ಮಕ್ಕಳಿಂದ ಛದ್ಮವೇಶ ಪ್ರದರ್ಶನ, ಗಾಂಧೀಜಿ ಪ್ರೀಯ ಹಾಡುಗಳ ಭಜನೆ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು.
ಮದ್ಯ-ಮಾಂಸ ನಿಷೇಧ : ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಅಕ್ಟೋಬರ್ ೨ ರಂದು ಮದ್ಯ-ಮಾಂಸ ಮಾರಾಟ ನಿಷೇಧಿಸಲಾಗುವುದು. ಆದೇಶ ಉಲ್ಲಂಘಿಸಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಸಿ.ಕೆ.ಹೊಸಮನಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎನ್.ಎಚ್.ನಾಗೂರ, ದೇವೇಂದ್ರ ಮಿರೇಕರ, ಭೀಮರಾಯ ಜಿಗಜಿಣಗಿ, ಸೋಮನಗೌಡ ಕಲ್ಲೂರ, ಗಿರೀಶ ಕುಲಕರ್ಣಿ, ಶ್ರೀಮತಿ ದಳವಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

