ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಮೇ.೧೨ರಂದು ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಪೂರ್ವಸಿದ್ಧತಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಭಗವಾನ ಬುದ್ಧ ಜಯಂತಿ ಅಂಗವಾಗಿ ಮೇ.೧೨ರಂದು ಬೆಳಿಗ್ಗೆ ೮-೩೦ ಗಂಟೆಗೆ ನಗರದ ಜಲನಗರದಲ್ಲಿರುವ ಬುದ್ಧವಿಹಾರದಿಂದ ಭಾವಚಿತ್ರ ಮೆರವಣಿಗೆಗೆ ಚಾಲನೆ ಹಾಗೂ ಬೆಳಿಗ್ಗೆ ೧೦ ಗಂಟೆಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ಭಗವಾನ ಬುದ್ಧ ಜಯಂತಿ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ಓರ್ವ ನುರಿತ ಉಪನ್ಯಾಸಕರನ್ನು ಆಹ್ವಾನಿಸಿ, ಉಪನ್ಯಾಸ ಕಾರ್ಯಕ್ರಮ ಏರ್ಪಡಿಸುವುದು, ಶಿಷ್ಠಾಚಾರದಂತೆ ಆಹ್ವಾನ ಪತ್ರಿಕೆ, ವಿವಿಧ ಗಣ್ಯರಿಗೆ ಆಹ್ವಾನ, ವೇದಿಕೆ ಅಲಂಕಾರ, ವಿವಿಧ ಕಲಾ ತಂಡಗಳೊಂದಿಗೆ ಭಾವಚಿತ್ರ ಮೆರವಣಿಗೆಗೆ, ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸ್ವಚ್ಛತೆ, ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಕುಡಿಯುವ ನೀರಿಗೆ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿಗಳಾದ ಅನಸೂಯಾ ಚಲವಾದಿ ಕ್ರೀಡಾಧಿಕಾರಿ ರಾಜಶೇಖರ್ ದೈವಾಡಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಶಾಂತ ಪೂಜಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು,ವಿವಿಧ ಸಮಾಜದ ಮುಖಂಡರು,ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
