೧೧ ಸಾವಿರ ಕುಟುಂಬಗಳಿಗೆ ದೀಪಾವಳಿ ಹಬ್ಬಕ್ಕೆ ಶಾಸಕ ಯತ್ನಾಳರಿಂದ ತಲಾ ರೂ.೨ ಸಾವಿರ ಕೊಡುಗೆ
ವಿಜಯಪುರ: ಈಗ ಆದೀಲಶಾಹಿ ಬಿಜಾಪುರ ಅಲ್ಲ, ಸನಾತನ ಹಿಂದೂ ಧರ್ಮದ ವಿಜಯಪುರ ಆಗಿದೆ. ದೇಶದಲ್ಲಿ ನಿಜವಾದ ಹಿಂದೂ ರಾಷ್ಟ್ರ ನಮ್ಮ ವಿಜಯಪುರದಲ್ಲಿ ಆಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ ಶ್ರೀ ಸ್ವಾಮಿ ವಿವೇಕಾನಂದ ಸೇನೆಯಿಂದ ಸನಾತನ ಹಿಂದೂ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಸರ್ವ ಗಜಾನನ ಮಂಡಳಿಗಳಿಗೆ ಸನ್ಮಾನ ಹಾಗೂ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದು ಧರ್ಮಕ್ಕೆ ಬೈಯುವುದು ದೇಶದಲ್ಲಿ ಪ್ಯಾಶನ್ ಆಗಿದೆ. ಅಂತವರೆಲ್ಲರೂ ಹೈಬ್ರಿಡ್ ತಳಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರದಲ್ಲಿ ಹಿಂದುತ್ವ ಸೋಲಿಸಲು ಸಾಕಷ್ಟು ಕುತಂತ್ರ ನಡೆಸಿದರೂ ಏನೂ ಆಗಲಿಲ್ಲ. ಅದಕ್ಕೆ ಕಾರಣ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳು. ನನ್ನ ನೀವು ಕೈಬಿಡುವುದಿಲ್ಲ ಎನ್ನುವುದು ಗೊತ್ತು. ಹೀಗಾಗಿ ಎಂದೂ ಕೂಡ ನಮ್ಮನ್ನು ಸೋಲಿಸಲು ಅವರಿಂದ ಆಗದು ಎಂದು ಹೇಳಿದರು.
ಎಲ್ಲರೂ ಚುನಾವಣೆ ಸಂದರ್ಭದಲ್ಲಿ ಹಣ ಹಂಚುತ್ತಾರೆ, ಆಸೆ-ಆಮಿಷ ಕೊಡುತ್ತಾರೆ. ಆದರೆ, ನಾನು ಈಗ ಅತ್ಯಂತ ಖುಷಿಯಿಂದ ದೀಪಾವಳಿ ಆಚರಣೆ ಮಾಡಲು ೧೧ ಸಾವಿರ ಕುಟುಂಬಗಳಿಗೆ ತಲಾ ರೂ.೨ ಸಾವಿರ ನೀಡಲು ನಿರ್ಧರಿಸಿದ್ದೇನೆ ಎಂದು ಇದೇ ವೇಳೆ ಘೋಷಣೆ ನೀಡಿದರು.
ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷ ರಾಘವ ಅಣ್ಣಿಗೇರಿ ಮಾತನಾಡಿದರು.
ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಯುವ ಸಮೂಹ ನೆರೆದಿತ್ತು.