ಬಿಜೆಪಿ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನೀವು ರಾಜ್ಯದ ಮುಖ್ಯಮಂತ್ರಿಗಳೋ ಅಥವಾ ಕೇವಲ ಮುಸಲ್ಮಾನರ ಮುಖ್ಯಮಂತ್ರಿಗಳೋ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ವಿಜಯಪುರ ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಬಿಜೆಪಿ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ವಿಜಯಪುರಕ್ಕೆ ತಲುಪಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಸ್ಲಿಂ ಹೆಣ್ಣುಮಕ್ಕಳಿಗೆ ವಿದೇಶದಲ್ಲಿ ಕಲಿಯಲು ದೊಡ್ಡ ಪ್ರಮಾಣದಲ್ಲಿ ಶಿಷ್ಯವೇತನ, ಗುತ್ತಿಗೆ ಕಾಮಗಾರಿಯಲ್ಲಿ ಮೀಸಲಾತಿ ಎಲ್ಲವೂ ನೋಡಿದರೆ ನೀವು ಕೇವಲ ಮುಸ್ಲಿಂರ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಅವರ ವರ್ತನೆ ಇದೆ ಎಂದರು.
ಹಿಂದೂ ಬಾಂಧವರಲ್ಲಿ ಬಡ ಹೆಣ್ಣು ಮಕ್ಕಳು ವಿದೇಶಕ್ಕೆ ಹೋಗಿ ವ್ಯಾಸಾಂಗ ಮಾಡಬಾರದೇ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಇರುವುದನ್ನು ನೋಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಗುಂಡಿಗೆ ಗಟ್ಟಿ ಇದ್ದರೆ ವಿಜಯಪುರಕ್ಕೆ ಬಂದು ನೋಡಿ ಎಂದು ಸವಾಲು ಹಾಕಿದರು.
ಬೆಲೆ ಏರಿಕೆಯಿಂದ ಪ್ರತಿಯೊಬ್ಬರು ಪರದಾಡುವಂತಾಗಿದೆ, ಇಂದು ಒಬ್ಬ ರೈತ ಟಿ.ಸಿ. ಪಡೆದುಕೊಳ್ಳಲು ಮೂರು ಲಕ್ಷ ಕಟ್ಟಬೇಕು, ಈ ರೀತಿ ಆತನಿಗೆ ಹೊರೆ ಹೊರೆಸಿ ಅನ್ನ ನೀಡುವ ಅನ್ನದಾತನ ಜೊತೆ ಚೆಲ್ಲಾಟವಾಡುವ ಕಾಂಗ್ರೆಸ್ ಸರ್ಕಾರವನ್ನು ಭಗವಂತ ಸಹ ಮೆಚ್ಚುವುದಿಲ್ಲ ಎಂದರು.
ಈ ಹಿಂದೆ ವೀರಶೈವ ಲಿಂಗಾಯತರನ್ನು ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಿದಾಗ ಕಾಂಗ್ರೆಸ್ ಸರ್ಕಾರ ಮುಂದೆ ಅಧಿಕಾರಕ್ಕೆ ಬರಲಿಲ್ಲ, ಈಗ ಇದೇ ರೀತಿ ದುಸ್ಸಾಹಕ್ಕೆ ಮತ್ತೊಮ್ಮೆ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಬೊಬ್ಬೆ ಹಾಕಿ ಒಂದೇ ಒಂದು ರೂ. ಬಿಡಿಗಾಸು ಕೃಷ್ಣೆ ಕೊಳ್ಳದ ಯೋಜನೆಗಳಿಗೆ ಹಣ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ವಿಜಯೇಂದ್ರ, ಯುಕೆಪಿ ಯೋಜನೆಗಳಿಗೆ ಕಾಂಗ್ರೆಸ್ ಹೆಚ್ಚು ಅನುದಾನ ನೀಡಿದೆಯೋ ಬಿಜೆಪಿ ಹೆಚ್ಚು ಅನುದಾನ ನೀಡಿದೆಯೋ ಎಂಬುದರ ಕುರಿತು ಬಹಿರಂಗವಾಗಿಯೇ ಚರ್ಚೆಯಾಗಲಿ ಎಂದು ಸವಾಲು ಹಾಕಿದರು.
ಜನವಿರೋಧಿ, ಕೂಲಿಕಾರ್ಮಿಕರ ವಿರೋಧಿಯಾಗಿರುವ ಕಾಂಗ್ರೆಸ್ ಸರ್ಕಾರವನ್ನು ಬುಡಮೇಲು ಮಾಡುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕಿದೆ ಎಂದರು.
ಯಾರೂ ಹೆದರಬೇಡಿ, ನಾನು ಯಡಿಯೂರಪ್ಪನವರ ಮಗ ಎನ್ನುವುದಕ್ಕೆ ಹೆಮ್ಮೆ ಇದೆ, ರಾಜ್ಯಾಧ್ಯಕ್ಷ ಎನ್ನುವ ಹೆಮ್ಮೆ ಇದೆ, ಅದಕ್ಕಿಂತ ನಾನು ಕಾರ್ಯಕರ್ತ ಎನ್ನುವುದಕ್ಕೆ ಅತೀವ ಹೆಮ್ಮೆ ಇದೆ ಎಂದರು.
ಮಾಜಿ ಸಚಿವ ಬಿ.ಶ್ರೀರಾಮಲು ಮಾತನಾಡಿ, ಕಾಂಗ್ರೆಸ್ ಮುಗಿಸುವ ಕೆಲಸವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರೇ ಮಾಡುತ್ತಿದ್ದಾರೆ, ಇನ್ನೊಂದೆಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಇತ್ತೀಚಿನ ಹೇಳಿಕೆ ಅವಲೋಕಿಸಿದಾಗ ಈ ಇಬ್ಬರ ಜಗಳದಲ್ಲಿ ಮರಿ ಖರ್ಗೆ ಅವರನ್ನು ಸಿ.ಎಂ. ಸ್ಥಾನದಲ್ಲಿ ಪ್ರತಿಷ್ಠಾಪಿಸುವ ಕಾರ್ಯದಲ್ಲಿ
ತೊಡಗಿಸಿಕೊಂಡಂತಿದೆ ಎಂದರು.
ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಜಗದೀಶ ಶೆಟ್ಟರ ಮಾತನಾಡಿ, ಚುನಾವಣೆ ಯಾವ ಸಂದರ್ಭದಲ್ಲಿಯೂ ಬರಬಹುದು, ಜನಾಕ್ರೋಶದಲ್ಲಿ ಜನಸಾಗರ ನೋಡಿದರೆ ಇದು ಬಿಜೆಪಿ ವಿಜಯೋತ್ಸವದಂತೆ ಗೋಚರಿಸುತ್ತಿದೆ ಎಂದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ರಾಜ್ಯ ಸರ್ಕಾರ ಬೆಲೆ ಏರಿಕೆ ಮೊದಲಾದ ತನ್ನ ಕೆಟ್ಟ ಕ್ರಮಗಳನ್ನು ಮುಚ್ಚಿಡಲು ಜಾತಿ ಜಾತಿ ನಡುವೆ ಜಗಳ ಹಚ್ಚಲು ಜಾತಿ ಜನಗಣತಿ ಮುನ್ನಲೆಗೆ ತಂದಿದೆ ಎಂದರು. ಸಣ್ಣ ಆರೋಪ ಬಂದಾಗ ದಿ.ರಾಮಕೃಷ್ಣ ಹೆಗಡೆ ರಾಜಿನಾಮೆ ನೀಡಿದರು, ಈಗ ಅನೇಕ ಆರೋಪ ಎದುರಿಸುತ್ತಿರುವ ನಿಮಗೆ ರಾಜಿನಾಮೆ ನೀಡಲು ಏನು ತೊಂದರೆ ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ, ಪಿ.ಎಚ್. ಪೂಜಾರ, ಬಿಜೆಪಿ ಜಿಲ್ಲಾಧ್ಯಕ್ಷ ಗುರು ಲಿಂಗಪ್ಪ ಅಂಗಡಿ, ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್.ಕೆ. ಬೆಳ್ಳುಬ್ಬಿ, ಮಾಜಿ ಶಾಸಕರಾದ ಎ.ಎಸ್. ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ ಸಾಸನೂರ, ಅರುಣ ಶಹಾಪೂರ, ದೊಡ್ಡನಗೌಡ ಪಾಟೀಲ, ರಮೇಶ ಭೂಸನೂರ, ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಪ್ರಮುಖರಾದ ಉಮೇಶ ಕಾರಜೋಳ, ಸಂಜೀವ ಐಹೊಳಿ, ಕಾಸುಗೌಡ ಪಾಟೀಲ ಪಾಲ್ಗೊಂಡಿದ್ದರು.

