ವಿಜಯಪುರದಲ್ಲಿ ಬಿಜೆಪಿಯ ಸಾವಿರಾರು ಕಾರ್ಯಕರ್ತರಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳ ಸುರಿಮಳೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗಿಸೋಣ.. ಬೆಲೆ ಏರಿಕೆ ವಿರುದ್ದ ಧಿಕ್ಕಾರ..ಎಂಬ ಘೋಷಣೆಗಳು ಬಿಜೆಪಿ ಸಾವಿರಾರು ಕಾರ್ಯಕರ್ತರಿಂದ ಗುರುವಾರ ನಗರದಲ್ಲಿ ಮೊಳಗಿದವು.
ರಾಜ್ಯ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ, ದಲಿತರ ಶ್ರೇಯೋಭಿವೃದ್ದಿ ಹಣ ಲೂಟಿ ಮಾಡುತ್ತಿದೆ ಎಂದು ಆರೋಪಿಸಿ ರಾಜ್ಯದಾದ್ಯಂತ ಬಿಜೆಪಿ ಆರಂಭಿಸಿರುವ ಜನಾಕ್ರೋಶ ಯಾತ್ರೆ ಗುರುವಾರ ವಿಜಯಪುರಕ್ಕೆ ತಲುಪಿತು. ಈ ವೇಳೆ ಸಹಸ್ರಾರು ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್.ಕೆ. ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ವಿಜುಗೌಡ ಪಾಟೀಲ, ಉಮೇಶ ಕಾರಜೋಳ ಮೊದಲಾದ ನಾಯಕರು ಸಾಥ್ ನೀಡಿದರು.
ತೆರೆದ ವಾಹನದಲ್ಲಿ ನಾಯಕರು ಜನಾಕ್ರೋಶ ಯಾತ್ರೆಯಲ್ಲಿ ಭಾಗಿಯಾದರು.
ಸಾವಿರಾರು ಕಾರ್ಯಕರ್ತರು ಯಾತ್ರೆಯಲ್ಲಿ ಭಾಗಿಯಾದರು. ನಗರದ ಶ್ರೀ ಶಿವಾಜಿ ಮಹಾರಾಜರ ವೃತ್ತದಿಂದ ಆರಂಭಗೊಂಡ ಯಾತ್ರೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ದರಬಾರ ಹೈಸ್ಕೂಲ್ ಮೈದಾನಕ್ಕೆ ತಲುಪಿತು.
ಯಾತ್ರೆ ಗಾಂಧಿ ವೃತ್ತ ತಲುಪಿದಾಗ ಪಾಲಿಕೆ ಮಾಜಿ ಸದಸ್ಯರಾದ ಉಮೇಶ ವಂದಾಲ, ಶಿವಾನಂದ ಭುಯ್ಯಾರ ಕ್ರೇನ್ ಮೂಲಕ ಬೃಹತ್ ಹಾರವನ್ನು ನಾಯಕರಿಗೆ ಅರ್ಪಿಸಿದ್ದು ವಿಶೇಷವಾಗಿತ್ತು.
ದರಬಾರ ಹೈಸ್ಕೂಲ್ ಮೈದಾನದ ತಲುಪಿದ ನಂತರ ಎಲ್ಲ ನಾಯಕರು ಬಾರುಕೋಲು ಝಳಪಡಿಸುವ ಮೂಲಕ ಬೆಲೆ ಏರಿಕೆ ವಿರುದ್ದ ಬಾರುಕೋಲು ಬೀಸಿದ್ದೇವೆ ಎಂದು ಗುಡುಗಿದರು.


