ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೇಶದ ನಾಗರಿಕತೆ, ಸಂಸ್ಕೃತಿ, ಸಹಬಾಳ್ವೆ, ಧಾರ್ಮಿಕ, ಸಾಮಾಜಿಕ ವೈವಿಧ್ಯತೆಯ ಬೇರುಗಳನ್ನು ಭದ್ರ ಪಡಿಸಿಕೊಳ್ಳುವ ಜತೆಗೆ ಉದಾರೀಕರಣ, ಖಾಸಗೀಕರಣ, ಜಾಗತಿಕರಣದ ಸವಾಲುಗಳನ್ನು ಎದುರಿಸಿ, ಭಾರತೀಯರಾದ ನಾವು ‘ವಿಶ್ವಪ್ರಜೆ’ ಗಳಾಗಬೇಕು ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಅವರು ಬುಧವಾರದಂದು ಅರಕೇರಿಯ ಜ್ಞಾನ ಜ್ಯೋತಿ ವಸತಿ ಶಾಲೆಯಲ್ಲಿ ಭಾರತೀಯ ಶಿಕ್ಷಣ ಮಂಡಲ ಜಿಲ್ಲಾ ಶಾಖೆಯಿಂದ ಶ್ರೀ ರಾಮನವಮಿ ಅಂಗವಾಗಿ ಹಮ್ಮಿಕೊಂಡ ಭಾರತೀಯ ಶಿಕ್ಷಣ ಮಂಡಲದ 56 ನೇ ಸಂಸ್ಥಾಪನ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಕೌಶಲ್ಯ ಅಭಿವೃದ್ಧಿ, ವಿಶ್ಲೇಷಣಾತ್ಮಕ, ಸೃಜನಶೀಲ ಕೌಶಲ್ಯಗಳ ಜತೆಗೆ ಪ್ರಾಯೋಗಿಕ ಜ್ಞಾನಕ್ಕೆ ಹೆಚ್ಚು ಒತ್ತು ನೀಡಬೇಕು. ವಿದ್ಯಾರ್ಥಿಗಳು ಜ್ಞಾನ, ಶಿಸ್ತು, ಉತ್ಸಾಹ, ನೈತಿಕತೆ ಮೂಲಕ ಆವಿಷ್ಕಾರ, ಸಾಧನೆಗೆ ಮುಂದಾಗಬೇಕು ಎಂದು ಹೇಳಿದರು.
ಮುಖ್ಯ ವಕ್ತಾರ ಸಿದ್ದು ಮದರಖಂಡಿ ಮಾತನಾಡಿ,
ಪ್ರಾಚೀನ ಭಾರತದ ಶಿಕ್ಷಣವು ವೇದಗಳಿಂದ ಪ್ರಭಾವಿತವಾಗಿದೆ. ಉದ್ಯೋಗ ಪಡೆಯುವದಕ್ಕಾಗಿ ಮಾತ್ರ ಓದು-ಬರಹ ಬೇಡ. ದೇಶದ ಬೇರು ಗಟ್ಟಿಗೊಳಿಸಲು ಜ್ಞಾನಾರ್ಜನೆ ಅಗತ್ಯ. ಹಿರಿಯರನ್ನು ಗೌರವಿಸುವ ಜತೆಗೆ ಎಲ್ಲರನ್ನು ನಿರಂತರವಾಗಿ ಪ್ರೀತಿಸುವ ಗುಣ ಇಂದಿನ ಯುವ ಪೀಳಿಗೆಗೆ ಅಗತ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿಜಯಕುಮಾರ ಮಮದಾಪುರ ಮಾತನಾಡಿ, ಪ್ರಾಚೀನ ಭಾರತದ ಶಿಕ್ಷಣ ಪದ್ದತಿಯಲ್ಲಿ ಗುರು-ಶಿಷ್ಯರ ಪರಂಪರೆ ಉದಾತ್ತವಾಗಿತ್ತು. ದೇಶದಲ್ಲಿ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಲು ಭಾರತೀಯರ ಸಾಹಸ, ವೀರತ್ವದ
ಪರಿಚಯಾತ್ಮಕ ಶಿಕ್ಷಣ ಇಂದಿನ ಮಕ್ಕಳಿಗೆ ಸಿಗಬೇಕು. ಜತೆಗೆ
ಶಿಕ್ಷಣದಲ್ಲಿ ಭಾರತೀಯತೆ ಇರಬೇಕು ಎಂದು ಹೇಳಿದರು.
ಚಂದ್ರಕಾಂತ ಉಂಡೋಡಿ ಅವರು ಸಂಘಟನಾ ಮತ್ತು ಶಾಂತಿ ಮಂತ್ರ ಹೇಳಿದರು. ಶಿಕ್ಷಕರಾದ ಎಸ್ ಎಸ್ ತೇಲಿ, ರೂಪಾ, ವೀರೇಶ ಮಡಿವಾಳ, ಎಸ್ ಎಂ ಬಿರಾದಾರ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

