ಎಕ್ಸಲಂಟ್ ಪಿಯು ಕಾಲೇಜಿನಲ್ಲಿ ನಡೆದ ಅಂಬೇಡ್ಕರ ಹಬ್ಬದಲ್ಲಿ ಶ್ರೀಕಾಂತ ಕೆ.ಎಸ್ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿದ್ಯಾರ್ಥಿ ಜೀವನದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅಳವಡಿಸಿಕೊಂಡರೆ ಸ್ವಾಭಿಮಾನದ ಭವಿಷ್ಯವನ್ನು ನಿರ್ಮಾಣ ಮಾಡಿಕೊಳ್ಳುವುದರೊಂದಿಗೆ ಬದುಕಿಗೆ ಹೊಸ ಅರ್ಥ ಬರುತ್ತದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಅವರ ಬದುಕಿನ ಹೋರಾಟವನ್ನು ಅರಿತುಕೊಂಡಲ್ಲಿ ಬದಲವಾಣೆಯ ಪರ್ವಕ್ಕೆ ಮನಸ್ಸು ತೆರೆದುಕೊಳ್ಳುತ್ತದೆ ಎಂದು ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್ ಹೇಳಿದರು.
ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ ೧೪೩ ನೇ ಜನ್ಮ ದಿನದ ಅಂಗವಾಗಿ ನಗರದ ಎಕ್ಸಲಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು; ಯಾವ ವ್ಯಕ್ತಿಯಲ್ಲಿ ಜ್ಞಾನ ತುಂಬಿರುತ್ತದೆ ಅಂಥ ವ್ಯಕ್ತಿಯನ್ನು ಇಡೀ ಜಗತ್ತೇ ಗೌರವಿಸುತ್ತದೆ ಎನ್ನುವುದಕ್ಕೆ ಡಾ.ಬಿ.ಆರ್ ಅಂಬೇಡ್ಕರ್ ಅವರು ಸಾಕ್ಷ್ಯವಾಗಿ ನಿಲ್ಲುತ್ತಾರೆ. ಒಂದು ಕಾಲದಲ್ಲಿ ಕಡು ಕಷ್ಟವನ್ನು ಅನುಭವಿಸಿ, ಶೋಷಣೆಯ ಕೂಪದಲ್ಲಿ ನರಳಿದ ಅವರು ತಮ್ಮ ಜ್ಞಾನದ ಬಲದಿಂದ ಇಡೀ ಜಗತ್ತೇ ತಮ್ಮ ಕಡೆಗೆ ತಿರುಗಿ ನೋಡುವಂತೆ ಮಾಡಿದರು. ಅವರ ಜ್ಞಾನದ ಎದುರು ತಲೆ ದೂಗುವ ಜಗತ್ತು ಅವರನ್ನು ವಿಶ್ವರತ್ನ ಎಂದು ಗೌರವಿಸುತ್ತದೆ. ಅವರಲ್ಲಿದ್ದ ಜ್ಞಾನದ ಹಸಿವು ಹಾಗೂ ಪುಸ್ತಕಪ್ರೇಮವನ್ನು ಕಂಡರೆ ಒಬ್ಬ ವ್ಯಕ್ತಿ ಇಷ್ಟೋಂದು ಓದುವುದಕ್ಕೆ ಸಾಧ್ಯವೇ? ಎನ್ನುವ ಪ್ರಶ್ನೆಗಳು ನಮ್ಮನ್ನು ಕಾಡದೇ ಬಿಡುವುದಿಲ್ಲ. ತಮ್ಮ ವಿಚಾರಗಳಿಗೆ ಎಲ್ಲಿ ಗೌರವ ಇರುವುದಿಲ್ಲವೋ ಆ ಕಡೆ ಯಾವತ್ತೂ ನಿಲ್ಲಬೇಡಿ ಎಂದು ಹೇಳುವ ಮೂಲಕ ಸ್ವಾರ್ಥಕ್ಕಾಗಿ ಇನ್ನೊಬ್ಬರೆದುರು ಮಂಡಿಯೂರುವ ಬದಲು ಸ್ವಾಭಿಮಾನದ ಬದುಕಿನೆಡೆಗೆ ಹೆಜ್ಜೆ ಹಾಕಿ ಎಂದು ಹೇಳಿದ್ದು ವಿದ್ಯಾರ್ಥಿಗಳಿಗೆ ಹೇಗೆ ಬದುಕಬೇಕು ಎನ್ನುವ ಪಾಠ ಹೇಳುತ್ತದೆ. ಹೀಗಾಗಿ ಬದುಕು ಬದಲಿಸುವ ಅವರ ಚಿಂತನೆಗಳನ್ನು ಯುವಶಕ್ತಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜೀವಶಾಸ್ತç ವಿಭಾಗದ ಹಿರಿಯ ಉಪನ್ಯಾಸಕ ಸಚೀನ ಪೂಜಾರ; ಬಾಬಾಸಾಹೇಬ್ ಅಂಬೇಡ್ಕರ್ ಅವರು ಜಗತ್ತಿನಲ್ಲಿಯೇ ಶ್ರೇಷ್ಠವಾದ ಸಂವಿಧಾನವನ್ನು ಕೊಟ್ಟು ಹೋಗಿದ್ದಾರೆ. ಪ್ರಜಾಪ್ರಭುತ್ವ ದೇಶದಲ್ಲಿ ಹೇಗೆ ಬದುಕಬೇಕು ಎನ್ನುವುದರ ಮಾರ್ಗಸೂಚಿಯಾಗಿ ನೀಡಿದ ಸಂವಿಧಾನದಲ್ಲಿ ಪ್ರಜೆಗಳಿಗಾಗಿ ಹಕ್ಕುಗಳನ್ನು ನೀಡಿದೆ. ಅದೇ ರೀತಿ ಹಕ್ಕುಗಳಿಗೆ ಪ್ರತಿಯಾಗಿ ಕರ್ತವ್ಯವನ್ನು ಮಾಡಬೇಕು ಎನ್ನುವುದನ್ನು ತಿಳಿಸಿಕೊಟ್ಟಿದೆ. ಆದರೆ ಇಂದು ಹಕ್ಕುಗಳನ್ನು ಅನುಭವಿಸುವ ನಾವುಗಳು ಕರ್ತವ್ಯಗಳನ್ನು ಮಾಡುವುದನ್ನು ಮರೆಯುತ್ತಿದ್ದೆವೆ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಬದುಕುತ್ತಿದ್ದೇವೆ. ಹೀಗಾಗಿ ವಿದ್ಯಾರ್ಥಿಗಳು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಬದುಕಬೇಕು ಮತ್ತು ಅಂಬೇಡ್ಕರ ಅವರ ಕನಸಿನ ಭಾರತವನ್ನು ನಿರ್ಮಾಣ ಮಾಡುವಲ್ಲಿ ಶ್ರಮಿಸಬೇಕು ಎಂದು ಹೇಳಿದರು.
ಭೌತಶಾಸ್ತç ವಿಭಾಗದ ಹಿರಿಯ ಉಪನ್ಯಾಸಕ ರವಿ ಕಲ್ಲೂರ ಮಠ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ಉಪನ್ಯಾಸಕ ವರ್ಗ ಹಾಗೂ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.

