ಸರ್ಕಾರದ ಕಾನೂನು ಇಲಾಖೆ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ೨೦೧೬ ಕ್ಕೂ ಪೂರ್ವದಲ್ಲಿ ನೇಮಕಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರನ್ನು ೨೦೧೭ ರ ವೃಂದ ಮತ್ತು ನೇಮಕಾತಿ ನಿಯಮಗಳಂತೆ ೧ ರಿಂದ ೫ ನೇ ವರ್ಗಕ್ಕೆ ಸೀಮಿತಗೊಳಿಸಿ ಪೂರ್ವಾನ್ವಯಗೊಳಿಸುವುದು ಸರಿಯಾದ ಕ್ರಮವಲ್ಲ ಎಂದು ಸರ್ಕಾರದ ಕಾನೂನು ಇಲಾಖೆ ಅಭಿಪ್ರಾಯಪಟ್ಟಿದೆ.
ಕಾನೂನು ಇಲಾಖೆಯ ಈ ಅಭಿಪ್ರಾಯ ಕಳೆದ ಏಳು ವರ್ಷಗಳಿಂದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಡೆಸುತಿದ್ದ ಹೋರಾಟಕ್ಕೆ ಶಕ್ತಿ ನೀಡಿದೆ ಎಂದು ಸಂಘದ ಅಧ್ಯಕ್ಷ ಕೆ.ನಾಗೇಶ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.
ಯಾವುದೇ ನಿಯಮಗಳು ಜಾರಿಗೆ ಬಂದ ದಿನಾಂಕದಿAದ ಅನ್ವಯವಾಗಲಿದ್ದು, ಅದರನ್ವಯ ಪ್ರಸ್ತುತ ಪ್ರಕರಣದಲ್ಲಿ ೨೦೧೭ ರ ವೃಂದ ಮತ್ತು ನೇಮಕಾತಿ ನಿಯಮಗಳನ್ನು ೨೦೧೬ ಕ್ಕಿಂತ ಮೊದಲು ನೇಮಕಗೊಂಡ ಶಿಕ್ಷಕರುಗಳಿಗೆ ಪೂರ್ವಾನ್ವಯಗೊಳಿಸುವುದು ಸರಿಯಾದ ಕ್ರಮವಲ್ಲ, ಪ್ರತಿಯೊಬ್ಬ ನೌಕರನಿಗೂ ಸದರಿ ನೌಕರನು ನೇಮಕಗೊಂಡ ಸಮಯದಲ್ಲಿ ಜಾರಿಯಲ್ಲಿದ್ದ ನಿಯಮಗಳನ್ನು ಅನ್ವಯಿಸಬೇಕಾಗಿರುತ್ತದೆ ಎಂದು ಕಾನೂನು ಇಲಾಖೆ ಅಭಿಪ್ರಾಯಪಟ್ಟಿದೆ ಎಂದರು.
೨೦೧೭ ರ ನೇಮಕಾತಿ ನಿಯಮಾವಳಿಯಂತೆ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರನ್ನು ೧ ರಿಂದ ೫ ನೇ ವರ್ಗಕ್ಕೆ ಸೀಮಿತಗೊಳಿಸಿ ಸರ್ಕಾರ ಆದೇಶಿಸಿತ್ತು. ಇದರಿಂದ ಮುಖ್ಯ ಶಿಕ್ಷಕರ ಹುದ್ದೆ, ಪ್ರೌಢಶಾಲಾ ಸಹಶಿಕ್ಷರ ಹುದ್ದೆಯ ಪದೋನ್ನತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರು ವಂಚಿತಗೊAಡು ಯಾವುದೇ ಪದೋನ್ನತಿಯಿಲ್ಲದೇ ರಾಜ್ಯದ ಸಹಸ್ರಾರು ಶಿಕ್ಷಕರು ನಿವೃತ್ತಿಹೊಂದಿದ್ದರು.
ಇದನ್ನು ಖಂಡಿಸಿ ಶಿಕ್ಷಕರ ಸಂಘ ಕಪ್ಪು ಬಟ್ಟೆ ಧರಿಸಿ, ತರಗತಿ ಬಹಿಷ್ಕಾರ ಮಾಡಿ, ಸರ್ಕಾರಕ್ಕೆ ಸಲ್ಲಿಸಬೇಕಾದ ಸಾಟ್ಸ್ ಮತ್ತಿತರ ಮಾಹಿತಿ ತುಂಬದೆ ಹಂತ ಹಂತವಾಗಿ ಪ್ರತಿಭಟನೆ ನಡೆಸುತ್ತಿತ್ತು. ನಿರಂತರ ಹೋರಾಟಕ್ಕೂ ಸರ್ಕಾರ ಸ್ಪಂದಿಸದೇ ಇರುವಾಗ, ಕಳೆದ ಆ.೧೨ ರಂದು ಅಂತಿಮ ಹಂತದ ಹೋರಾಟಕ್ಕೆ ಸಂಘ ಕರೆ ಕೊಟ್ಟಿತ್ತು. ಬೆಂಗಳೂರಿನ ಫ್ರಿಡಂ ಪಾರ್ಕ್ ನಲ್ಲಿ ಆ ದಿನ ನಡೆದ ಹೋರಾಟದಲ್ಲಿ ೭೫ ಸಾವಿರಕ್ಕೂ ಅಧಿಕ ಶಿಕ್ಷಕರು ಭಾಗವಹಿಸಿದ್ದರು. ಹೋರಾಟದ ತೀವ್ರತೆ ಅರಿತು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣ, ರಾಮೋಜಿಗೌಡರು, ಶಿಕ್ಷಣ ತಜ್ಞ ಡಾ ವಿ.ಪಿ. ನಿರಂಜನಾರಾಧ್ಯ, ಸಾಹಿತಿ ಬರಗೂರು ರಾಮಚಂದ್ರಪ್ಪ, ಅಖಿಲ ಭಾರತ ಶಿಕ್ಷಕರ ಫೆಡರೇಷನ್ ಅಧ್ಯಕ್ಷ ಬಸವರಾಜ ಗುರಿಕಾರ ಅವರನ್ನು ಸಿಎಂ, ಗೃಹ ಕಚೇರಿಗೆ ಕರೆದು ಸಭೆ ನಡೆಸಿದರು.
ತುಮಕೂರಿನಲ್ಲಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಫೋನ್ ಕರೆ ಮಾಡಿ ಹೋರಾಟ ಸ್ಥಳಕ್ಕೆ ಹೋಗಿ ಹೋರಾಟಗಾರರ ಬೇಡಿಕೆ ಆಲಿಸಿ, ಅಧಿಕಾರಿಗಳ ಸಭೆ ನಡೆಸಲು ಸೂಚಿಸಿದರು. ಹೋರಾಟ ಸ್ಥಳಕ್ಕೆ ಬಂದು ಶಿಕ್ಷಣ ಸಚಿವರು ನಾನಾ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು.
೨೦೨೪ ರ ಸೆ.೪ ರಂದು ಶಿಕ್ಷಕರ ದಿನಾಚರಣೆಯ ಮುನ್ನಾ ದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕ ಸಂಘಟನೆ ಹಾಗೂ ವಿಧಾನ ಪರಿಷತ್ ಸದಸ್ಯರ ಜತೆ ಸುಮಾರು ಎರಡೂವರೆ ಗಂಟೆಗಳ ಕಾಲ ಸಭೆ ನಡೆಸಿ, ಹೊಸ ವೃಂದ ನೇಮಕಾತಿ ನಿಯಮಾವಳಿಗಳು ೨೦೧೬ ಕ್ಕೂ ಪೂರ್ವದಲ್ಲಿ ನೇಮಕಗೊಂಡ ಶಿಕ್ಷಕರಿಗೆ ಅನ್ವಯಿಸುವುದು ತಪ್ಪು ಎಂದು ಅಭಿಪ್ರಾಯಪಟ್ಟಿದ್ದರು. ಸೆ.೫ ಶಿಕ್ಷಕರ ದಿನಾಚರಣೆಯಲ್ಲಿಯೂ ಈ ಅನ್ಯಾಯ ಸರಿಪಡಿಸುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದ್ದರು. ಅದಕ್ಕಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಆ ಸಮಿತಿಯ ಮುಂದೆ ಎರಡೂ ಬಾರಿ ಶಿಕ್ಷಕ ಸಂಘಟನೆ, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆದ ಅನ್ಯಾಯವನ್ನು ಪ್ರತಿಪಾದಿಸಿತ್ತು. ಈ ಬಗ್ಗೆ ಕಾನೂನು ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಾಗೂ ಆರ್ಥಿಕ ಇಲಾಖೆಗೆ ಅಭಿಪ್ರಾಯ ಕೋರಿ ಬರೆದಿದ್ದರು.
ಈಗ ಕಾನೂನು ಇಲಾಖೆ ನೀಡಿದ ಅಭಿಪ್ರಾಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರಂತರ ಹೋರಾಟಕ್ಕೆ ಶಕ್ತಿ ತುಂಬಿದೆ ಎಂದರು.
ಶೀಘ್ರವೇ ಸರ್ಕಾರ ೨೦೧೭ ಕ್ಕಿಂತ ಮೊದಲು ನೇಮಕಾತಿ ಸಂದರ್ಭದಲ್ಲಿದ್ದ ನಿಯಮಗಳಂತೆ ಬಡ್ತಿ ನೀಡಬೇಕು, ಪದವಿ ಪಡೆದ ೫೮,೦೦೦ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಒಂದು ವೇತನ ಬಡ್ತಿ ನೀಡಿ, ಉನ್ನತ ವ್ಯಾಸಂಗ ಪಡೆದವರಿಗೆ ನ್ಯಾಯ ದೊರಕಿಸಬೇಕೆಂದು ಸಂಘ ಮನವಿ ಮಾಡಿದೆ.
