ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಅಂಬೇಡ್ಕರ್ ಅವರ ತತ್ವಶಾಸ್ತ್ರ ಇಂದಿಗೂ ಪ್ರಸ್ತುತವಾಗಿದೆ. ಭಾರತದ ಸಾಮಾಜಿಕ-ಸಾಂಸ್ಕೃತಿಕ ವ್ಯವಸ್ಥೆಯನ್ನು ರೂಪಿಸುವಲ್ಲಿ ಬಾಬಾಸಾಹೇಬ್ ಅವರ ಸಕ್ರಿಯ ಪಾತ್ರವಿಲ್ಲದಿದ್ದರೆ, ಹಳೆಯ ಮತ್ತು ಪುರಾತನ ನಂಬಿಕೆಗಳಿಂದ ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟçವಾದ ದೇಶಕ್ಕೆ ಯಾವುದೇ ಪ್ರಗತಿ ಸಾಧಿಸುವುದು ಅಸಾಧ್ಯವಾಗಿತ್ತು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ಪಟ್ಟಣದ ಬಸ್ ನಿಲ್ದಾಣದ ಹತ್ತಿರವಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೪ನೇ ಜಯಂತಿ ಪ್ರಯುಕ್ತವಾಗಿ ಡಾ.ಅಂಬೇಡ್ಕರ್ ಅವರ ಪುತ್ತಳಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಅವರು ಈ ದೇಶದ ಅಸ್ಮಿತೆ. ಭಾರತದ ಭವ್ಯ ಭವಿಷ್ಯಕ್ಕಾಗಿ ತಮ್ಮ ಇಡೀ ಬದುಕನ್ನ ದೇಶಕ್ಕೆ ಸಮರ್ಪಣೆ ಮಾಡಿದಂತಹ ದೊಡ್ಡ ರತ್ನ. ಸಂವಿಧಾನವನ್ನು ರಚನೆ ಮಾಡುವ ಮೂಲಕ ಸರ್ವ ಸಮುದಾಯಗಳಿಗೂ ನ್ಯಾಯವನ್ನ ನೀಡಿದಂತವರು ಅಂತವರ ಬದುಕು ಮತ್ತು ಅವರ ತತ್ವಗಳು ಇಂದಿಗೂ ನಮಗೆಲ್ಲ ಆದರ್ಶವಾಗಿವೆ ಎಂದರು.
ಈ ವೇಳೆ ಸಿಂದಗಿ ಬುದ್ಧ ವಿಹಾರದ ಪೂಜ್ಯಶ್ರೀ ಬಂತೇಜಿ ಸಂಘಪಾಲ್ ಅವರು ಮಾತನಾಡಿ, ಡಾ. ಅಂಬೇಡ್ಕರ್ ಅವರ ಕೊಡುಗೆಯನ್ನು ಈ ದೇಶ ಯಾವತ್ತು ಮರೆಯಬಾರದು. ಅವರೊಬ್ಬ ಈ ದೇಶದ ಶ್ರೇಷ್ಠ ನಕ್ಷತ್ರ. ದೇಶದ ಭವಿಷ್ಯತ್ತಿಗಾಗಿ ಅನೇಕ ಕನಸುಗಳನ್ನು ಕಂಡು ಅವುಗಳನ್ನ ಯತಾವತ್ತಾಗಿ ಸಕಾರ ಮಾಡಿದವರಲ್ಲಿ ಡಾ. ಅಂಬೇಡ್ಕರ್ ಅವರು ಅಗ್ರಗಣ್ಯರು. ಬುದ್ಧನ ಅನುಯಾಯಿಯಾಗಿ ಬುದ್ಧ ತತ್ವಗಳನ್ನ ಜಗತ್ತಿಗೆ ಸಾರಿದವರು. ಸೂರ್ಯ ಚಂದ್ರ ಇರುವರೆಗೆ ಅವರ ಹೆಸರು ಅಜರಾಮರವಾಗಿದೆ ಎಂದರು.
ಈ ವೇಳೆ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ ರಾಜಶೇಖರ ಕೂಚಬಾಳ, ಮಹಾನಂದ ಬೊಮ್ಮಣ್ಣಿ, ಶರಣು ಸಿಂಧೆ, ಪರಶುರಾಮ ಕಾಂಬಳೆ, ನೂರಅಹ್ಮದ್ ಅತ್ತಾರ, ರಮೇಶ ನಡುವಿನಕೇರಿ, ವಸತಿ ನಿಲಯ ಮೇಲ್ವಿಚಾರಕ ಮಹೇಶ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಅಂಬೇಡ್ಕರ್ ಅಭಿಮಾನಿಗಳು ಇದ್ದರು. ಈ ಸಂದರ್ಭದಲ್ಲಿ ನೂರಾರು ಮಹಿಳೆಯರಿಂದ ಬುದ್ಧ ಮಂತ್ರ ಪಠಣ ನೆರವೇರಿತು.

