ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ಐತಿಹಾಸಿಕ ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ದೇವರ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶನಿವಾರ ಸಂಜೆ ವಿಜ್ರಂಭಣೆಯಿಂದ ಜರುಗಿತು.
ಪ್ರತಿ ವರ್ಷ ದವನದ ಹುಣ್ಣಿಮೆಯಂದು ನಡೆಯುವ ದಿಗಂಬರೇಶ್ವರ ಮಠದ ಜಾತ್ರೆ ತಾಲೂಕಿನಲ್ಲಿಯೇ ಅತಿ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ವಿಶೇಷ ಪೂಜೆ, ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಗ್ಗೆಯಿಂದಲೇ ಭಕ್ತರು ಶ್ರೀ ಮಠಕ್ಕೆ ಬಂದು ಹರಕೆ ಹೊತ್ತಿರುವ ಬೇಡಿಕೆಯನ್ನು ತೀರಿಸಿದರು.
ಪ್ರತಿ ವರ್ಷ ರಥೋತ್ಸವಕ್ಕೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಡವಳೇಶ್ವರ ಗ್ರಾಮದ ಭಕ್ತರು ತೇರಿನ ಹಗ್ಗವನ್ನು ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಮೂಲಕ ಶ್ರೀ ಮಠಕ್ಕೆ ಆಗಮಿಸಿದ ನಂತರ ದಿಗಂಬರೇಶ್ವರ ಮಠದ ಪೀಠಾಧಿಕಾರಿಗಳಾದ ಕಲ್ಲಿನಾಥ ದೇವರು ಮೂರ್ತಿಯೊಂದಿಗೆ ರಥವೇರಿದ ಬಳಿಕವೇ ನೆರೆದಿದ್ದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ದೇವರ ಜಯ ಘೋಷಣೆಗಳು ಕೂಗಿ, ತೇರು ಎಳೆಯಲಾಯಿತು. ಜಿಲ್ಲೆಯ ವಿವಿಧ ತಾಲೂಕು ಗ್ರಾಮಗಳಿಂದ ಭಕ್ತರು, ಆಗಮಿಸಿ ರಥೋತ್ಸವಕ್ಕೆ ಬಾಳೆ ಹಣ್ಣು, ಉತ್ತತ್ತಿ ಎಸೆದು ಶ್ರದ್ಧಾ ಭಕ್ತಿಯಿಂದ ದೇವರಿಗೆ ನೈವೇದ್ಯ ಕಾಯಿ ಕರ್ಪೂರ ಅರ್ಪಿಸಿ ದೇವರ ದರ್ಶನ ಪಡೆದು ಜಾತ್ರೆಯಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ.

