ಡಿಸಿಸಿ ಬ್ಯಾಂಕ್ ಗೆ ರೂ.14.30 ಕೋಟಿ ನಿವ್ವಳ ಲಾಭ :ಸಚಿವ ಶಿವಾನಂದ ಪಾಟೀಲ
ವಿಜಯಪುರ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸ್ಥಾಪನೆಯಾಗಿ ನೂರಾ ನಾಲ್ಕು ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಬ್ಯಾಂಕಿನ ಶತಮಾನೋತ್ಸವವನ್ನು ಬರುವ ಜನೇವರಿಯಲ್ಲಿ ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷರೂ ಆದ ರಾಜ್ಯ ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಶುಕ್ರವಾರ ನಗರದ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
1919 ರಲ್ಲಿ ಸ್ಥಾಪಿತವಾದ ಈ ಬ್ಯಾಂಕ್ 104 ವರ್ಷಗಳ ನಿರಂತರ, ಸಮರ್ಪಕ ಸೇವೆ ಪೂರ್ಣಗೊಳಿಸಿ ಈಗ 105 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಬ್ಯಾಂಕಿನ ಈಗಿನ ಆಡಳಿತ ಮಂಡಳಿಯು ಬ್ಯಾಂಕಿನ ಶತಮಾನೋತ್ಸವ ನೂತನ ಕಟ್ಟಡ ನಿರ್ಮಾಣಕ್ಕೆ 2019 ರ ಜುಲೈ 28 ರಂದು ಚಾಲನೆ ನೀಡಿದ್ದು, ಈಗ ಭವ್ಯ ಕಟ್ಟಡ ನಿರ್ಮಾಣಗೊಂಡು ಪ್ರಸ್ತುತ ಲೋಕಾರ್ಪಣೆಗೆ ಸಿದ್ಧವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಶತಮಾನೋತ್ಸವದ ಸವಿನೆನಪಿನಲ್ಲಿ ನಿರ್ಮಿಸಲಾದ ನೂತನ ಕಟ್ಟಡ ಈಗ ಸಂಪೂರ್ಣಗೊಂಡಿದ್ದು, ಕಾರಣಾಂತರಗಳಿಂದ ಮುಂದೂಡಿದ ಶತಮಾನೋತ್ಸವ ಸಮಾರಂಭವನ್ನು ಮುಂಬರುವ ಜನೇವರಿಯಲ್ಲಿ ನೂತನ ಕಟ್ಟಡದ ಲೋಕಾರ್ಪಣೆಯೊಂದಿಗೆ ಅತ್ಯಂತ ಸಂಭ್ರಮದಿಂದ ಆಚರಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಶತಮಾನೋತ್ಸವ ಸಮಾರಂಭಕ್ಕೆ ಆಗಮಿಸಲು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಒಪ್ಪಿಗೆ ಸೂಚಿಸಿದ್ದು, ಇದಕ್ಕೆ ಕೇಂದ್ರ ಸಚಿವರನ್ನೂ ಆಹ್ವಾನಿಸುವ ಆಲೋಚನೆ ಇದೆ ಎಂದು ಅವರು ಹೇಳಿದರು.
ಸೋಮನಗೌಡ ಬಿರಾದಾರ, ಹಣಮಂತರಾಯಗೌಡ ಪಾಟೀಲ, ಶ್ರೀಮತಿ ಸಂಯುಕ್ತಾ ಪಾಟೀಲ, ಗುತುಶಾಂತ ನಿಡೋಣಿ, ಸುರೇಶ ಬಿರಾದಾರ, ಶ್ರೀಮತಿ ರಾಜೇಶ್ವರಿ ಹೆಬ್ಬಾಳ, ಅರವಿಂದ ಪೂಜಾರಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಡಿ.ಬಿರಾದಾರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪತ್ರಿಕಾಗೋಷ್ಠಿಯ ನಂತರ ಬ್ಯಾಂಕಿನ ಆವರಣದಲ್ಲಿ ನಿರ್ಮಿಸಿದ್ದ ಭವ್ಯ ಸಭಾಮಂಟಪದಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ಬ್ಯಾಂಕಿನ 104 ನೇ ವಾರ್ಷಿಕ ಸರ್ವಸಾಧಾರಣ ಸಭೆಯೂ ಯಶಸ್ವಿಯಾಗಿ ಜರುಗಿತು.