ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಬಾಗಲಕೋಟೆ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳನ್ನು ತಡೆಯಲು ಪೊಲೀಸ್ ಇಲಾಖೆ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಮುಖ್ಯ ರಸ್ತೆಗಳಲ್ಲಿ ಅಪಘಾತ ವಲಯಗಳಲ್ಲಿ ಅಳವಡಿಸಿರುವ ಸೋಲಾರ್ ಬ್ಲಿಂಕರ್ಸ್ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಜಮಖಂಡಿ ಮತ್ತು ಸಾವಳಗಿ ಪೊಲೀಸ್ ಠಾಣಾ ವ್ಯಾಪ್ತಿಯ ಆಲಗೂರ ಮತ್ತು ಕವಟಗಿ ಆರ್ ಸಿ ಸೇರಿ ಜಿಲ್ಲೆಯಲ್ಲಿನ ಮುಖ್ಯರಸ್ತೆಗಳಲ್ಲಿನ ಅಪಘಾತ ವಲಯಗಳನ್ನು ಗುರುತಿಸಿ ಅಲ್ಲಿ ಜಿಗ್‌ಜಾಗ್ ಬ್ಯಾರಿಕೇಡ್ ಅಳವಡಿಸಿ ವಾಹನಗಳ ವೇಗ ಕಡಿಮೆ ಮಾಡುವುದರ ಮೂಲಕ ಅಪಘಾತಗಳ ಸಂಖ್ಯೆ ಕಡಿಮೆಯಾಗುವಂತೆ ಮಾಡಿತ್ತು. ಈ ಪ್ರಯೋಗದ ಯಶಸ್ಸಿನ ಬೆನ್ನಲ್ಲೇ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಸೋಲಾರ್ ಬ್ಲಿಂಕರ್ಸ್ ಅಳವಡಿಸಿದೆ.
ವಿಜಯಪೂರ—ಧಾರವಾಡ ಮುಖ್ಯ ರಸ್ತೆಯಲ್ಲಿನ ಚಿಕ್ಕಪಡಸಲಗಿ ಸೇತುವೆ ಬಳಿ ತಿರುವುಗಳಲ್ಲಿ, ಕ್ರಾಸ್ ರೋಡ್‌ಗಳಲ್ಲಿ, ಮುಖ್ಯ ರಸ್ತೆಗೆ ಬರುವ ದಾರಿಯಲ್ಲಿ ಹೀಗೆ ಅಪಘಾತವಾಗುವ ಸಾಧ್ಯತೆಗಳಿರುವ ಕಡೆಗಳಲ್ಲಿ ಸೋಲಾರ್ ಬ್ಲಿಂಕರ್ಸ್ ಅಳವಡಿಸಿದ್ದು, ಇದರಲ್ಲಿರುವ ಕೆಂಪು ದೀಪ ಮಿನುಗುತ್ತಾ ವಾಹನ ಸವಾರರನ್ನು ಎಚ್ಚರಿಸುತ್ತಿದೆ. ಇದನ್ನು ಗಮನಿಸಿ ವಾಹನ ಸವಾರರು ಎಚ್ಚರದಿಂದ ವಾಹನ ಚಲಾಯಿಸುವುದರಿಂದ ಅಪಘಾತಗಳು ನಿಯಂತ್ರಣಕ್ಕೆ ಬರಬಹುದು ಎಂಬುದು ಪೊಲೀಸ್ ಇಲಾಖೆ ಮಹದಾಸೆಯಾಗಿದೆ. ಇಲಾಖೆಯ ಕಳಕಳಿಗೆ ವಾಹನ ಸವಾರರು ಸ್ಪಂದಿಸಬೇಕಾಗಿದೆ.

