ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ವಿಜಯಪುರ ಶಾಸಕ ಬಸನಗೌಡ ಯತ್ನಾಳ ಅವರು ಪ್ರವಾದಿ ಮಹಮ್ಮದ ಪೈಗಂಬರ್ ಅವರ ಬಗ್ಗೆ ಮಾತನಾಡಿರುವದಕ್ಕೆ ಇಲ್ಲಿನ ಮುಸ್ಲಿಂ ಫೋರಂ ಖಂಡಿಸಿದೆ.
ಈ ಬಗ್ಗೆ ನಡೆದ ಸುದ್ದಿಗೋಷ್ಟಿಯಲ್ಲಿ ಫೋರಂ ನ ಅಧ್ಯಕ್ಷ ಮಹೆಬೂಬ ಗೊಳಸಂಗಿ ಮಾತನಾಡಿ ಜನರ ಚಪ್ಪಾಳೆ ಗಿಟ್ಟಿಸಿಕೊಳ್ಳಲು ಬಸನಗೌಡರು ಮನಸ್ಸಿಗೆ ಬಂದಂತೆ ಮಾತನಾಡುವದು ಸರಿಯಲ್ಲ. ಟೋಪಿ, ಜಾಳಿಗೆ, ಭುರ್ಕಾ ಧರಿಸಿದವರು ನಮ್ಮ ಮನೆಗೆ ಬರಬೇಡಿ, ಗಡ್ಡಾ ಬಿಟ್ಟವರು ನಮ್ಮ ಮನೆಗೆ ಬರಬೇಡಿ ಎಂದು ಹೇಳುವ ಇವರು ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದಾಗ ನಮ್ಮ ಮನೆಗೆ ತಾವೇ ಬಂದು ಊಟ ಮಾಡಿ ಹೋಗಿದ್ದಾರೆ. ಇದನ್ನೆಲ್ಲ ಮರೆತು ಹೀಗೆಲ್ಲ ಮಾತನಾಡುವದು ಸರಿಯಲ್ಲ. ಅವಶ್ಯತೆ ಇದ್ದಾಗ ಮುಸ್ಲೀಮರ ಬೆಂಬಲ ಪಡೆಯೋದು ಇಲ್ಲದಿರುವಾಗ ಹಿಂದೂಗಳ ಬೆಂಬಲ ಪಡೆಯೋ ಇವರು ಹಿಂದೂಗಳಿಗಾಗಿಯಾದರೂ ಏನು ಮಾಡಿದ್ದಾರೆ ಎಂದು ತೋರಿಸಿ ಕೊಡಬೇಕು. ಪೈಗಂಬರ ಅವರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿದ ಬಗ್ಗೆ ನಮ್ಮ ಸಮಾಜದ ವತಿಯಿಂದ ಸಭೆ ಕರೆದು ನಿರ್ಣಯಿಸಿ, ಅವರ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಒತ್ತಾಯಿಸುತ್ತೇವೆ ಎಂದರು.
ಮೌಲಾನಾ ಮಹಮ್ಮದ ಹುಸೇನ ಉಮರಿ, ಪ್ರಮುಖರಾದ ಎನ್.ಆರ್.ಮೊಕಾಶಿ ವಕೀಲರು ಮತ್ತು ಪಿಂಟು ಸಾಲಿಮನಿ ಮಾತನಾಡಿ, ಸಂವಿಧಾನದ ಅಡಿಯಲ್ಲಿ ಶಾಸಕರಾಗಿ ಕಾರ್ಯ ನಿರ್ವಹಿಸುವ ಬಸನಗೌಡರು ಒಂದು ಕೋಮನ್ನು ಹೀಯಾಳಿಸುವದು ಸರಿಯಲ್ಲ. ಮರ್ಯಾದಾ ಪುರುಶೋತ್ತಮ ಶ್ರೀರಾಮನವಮಿಯ ಕಾರ್ಯಕ್ರಮದಲ್ಲಿ ಅನವಶ್ಯಕವಾಗಿ ಮುಸ್ಲಿಂರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವದು ಖಂಡನೀಯ. ಈ ಬಗ್ಗೆ ಬರುವ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದರು.
ಈ ವೇಳೆ ಅಲ್ಲಾಭಕ್ಷ ನಾಯ್ಕೋಡಿ, ಮಲಿಕ ನದಾಫ, ಫಾರುಕ ಚೌದ್ರಿ, ಸಮೀರ ಹುಣಸಗಿ, ಸಿರಾಜ ಮೋಮಿನ್, ಇರ್ಫಾನ ಕೂಡಗಿ, ಹುಸೇನ ಮುಲ್ಲಾ ಸೇರಿದಂತೆ ಮತ್ತೀತರರು ಇದ್ದರು.
“ಬಸನಗೌಡರು ಹೀಗೆಲ್ಲಾ ಮಾಡುತ್ತಿದ್ದಾರೆ ಅಂತಾ ಖಾದ್ರಿ ವಕೀಲರು ಅವರ ತಾಯಿಯನ್ನು ನಿಂದಿಸುವದು ಸರಿಯಲ್ಲ. ನಮ್ಮ ಧರ್ಮದಲ್ಲಿ ಯಾರಿಗೂ ಅವಹೇಳನಕಾರಿಯಾಗಿ ಮಾತನಾಡಬೇಕು ಅಂತ ಕಲಿಸಿಕೊಟ್ಟಿಲ್ಲ. ಇದನ್ನೂ ನಾನು ಖಂಡಿಸುತ್ತೇನೆ.”
– ಮಹೆಬೂಬ್ ಗೊಳಸಂಗಿ
ಫೋರಂ ಅಧ್ಯಕ್ಷ

