ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರ ಅಧ್ಯಕ್ಷತೆಯ ಶ್ರೀ ಸಿದ್ದೇಶ್ವರ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಗೋ ರಕ್ಷಾ ಕೇಂದ್ರದಲ್ಲಿ ಹಿಂದೂಗಳು ಪೂಜ್ಯ ಭಾವನೆಯಿಂದ ಕಾಣುವ ಸಾವಿರಾರು ಗೋವುಗಳನ್ನು ಭಕ್ತಿಯಿಂದ ಸಾಕಿ ಸಲುವುತ್ತಿದ್ದು, ಕಾಂಗ್ರೆಸ್‌ನ ಹಮೀದ್ ಮುಶ್ರೀಪ್ ಮಾಡಿರುವ ಆರೋಪ ಸುದ್ದ ಸುಳ್ಳಾಗಿದ್ದು, ಶ್ರೀ ಸಿದ್ದೇಶ್ವರ ಸಂಸ್ಥೆಯ ಆಡಳಿತ ಮಂಡಳಿ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಶ್ರೀ ಸಿದ್ದೇಶ್ವರ ಸಂಸ್ಥೆಯ ಆಡಳಿತ ಮಂಡಳಿ, ಇದೊಂದು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸಂಸ್ಥೆಯಾಗಿದ್ದು, ನಗರ ಶಾಸಕರು ಸೇರಿದಂತೆ ಅನೇಕರು ದಾನ ಮಾಡಿದ ಜಾಗದಲ್ಲಿ ಗೋವುಗಳ ರಕ್ಷಣೆಯ ಪವಿತ್ರ ಕಾರ್ಯಕ್ಕಾಗಿ ಗೋ ರಕ್ಷಾ ಕೇಂದ್ರ ಆರಂಭಿಸಲಾಗಿದೆ. ಮೇವು, ಹಿಂಡಿ ಸೇರಿದಂತೆ ನಿರ್ವಹಣೆಗಾಗಿ ನಿರಂತರವಾಗಿ ಹಲವಾರು ದಾನಿಗಳು ದಾನ ಮಾಡುತ್ತಿದ್ದಾರೆ. ಇದರಿಂದ ವ್ಯವಸ್ಥಿತವಾಗಿ ಸಾವಿರಾರು ಗೋವುಗಳ ಪೋಷಣೆ ಕಾರ್ಯ ಸಾಗಿದೆ.
ಕಟುಕರಿಗೆ ಹೋಗುವ ಗೋವುಗಳನ್ನು ರಕ್ಷಿಸಿ, ಅಲ್ಲಿಗೆ ತಂದು ಬಿಡುತ್ತಾರೆ. ವಯಸ್ಸಾದ ಗೋವುಗಳನ್ನು ನಿರ್ವಹಣೆ ಮಾಡಲಾಗದವರು ಕೂಡ ಅಲ್ಲಿಗೆ ತಂದು ಬಿಟ್ಟು ಹೋಗುತ್ತಾರೆ. ಈ ಧಾರ್ಮಿಕ ಸಂಸ್ಥೆಯ ಗೋ ರಕ್ಷಾ ಕೇಂದ್ರದಲ್ಲಿ ಅಂತವುಗಳನ್ನು ರಕ್ಷಿಸಿ, ಪೋಷಿಸಿ, ಸಂತಾನಾಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ. ಗೋ ಸೇವಾ ಮಹತ್ಕಾರ್ಯಕ್ಕೆ ಪಕ್ಷಾತೀತವಾಗಿ ಅನೇಕರು ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ. ಗೋ ಶಾಲೆಗೆ ನಿತ್ಯ ನೂರಾರು ಜನರು ಭೇಟಿ ನೀಡಿ ಅಲ್ಲಿನ ವ್ಯವಸ್ಥಿತ ನಿರ್ವಹಣೆ ಬಗ್ಗೆ ಮಾಹಿತಿ ಪಡೆದುಕೊಂಡು ಹೋಗುತ್ತಾರೆ.
ಇಂತಹ ಧಾರ್ಮಿಕ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಗೋ ರಕ್ಷಾ ಕೇಂದ್ರದಿಂದ ಕಲಬುರ್ಗಿ ಕಸಾಯಿಖಾನೆಗೆ ಗೋವುಗಳನ್ನು ಕಳಿಸಿಕೊಡಲಾಗುತ್ತಿದೆ ಎಂಬ ಹಮೀದ್ ಮುಶ್ರೀಪ್ ಅವರ ಆರೋಪದಿಂದ ಶತಮಾನ ಕಂಡ ನಮ್ಮ ಧಾರ್ಮಿಕ ಸಂಸ್ಥೆಗೆ ಬಹಳ ಆಘಾತಕಾರಿ ಆಗಿದೆ. ಜೊತೆಗೆ ಅಸಂಖ್ಯಾತ ಗೋ ಭಕ್ತರ ಮನಸ್ಸಿಗೂ ಕೂಡ ನೋವುಂಟಾಗಿದೆ.
ಯಾವಾಗ ಮತ್ತು ಎಷ್ಟು ಗೋವುಗಳನ್ನು ಕಲಬುರ್ಗಿ ಗೆ ಕಳಿಸಲಾಗಿದೆ? ಎಷ್ಟಕ್ಕೆ ಮಾರಾಟ ಮಾಡಲಾಗಿದೆ? ಏನಾದರೂ ಈ ಬಗ್ಗೆ ಸ್ಪಷ್ಟ ದಾಖಲೆ ಇದ್ದರೆ, ಒಂದು ವಾರದೊಳಗೆ ನೀಡಬೇಕು. ಇಲ್ಲವಾದರೆ ಆತನ ಮೇಲೆ ಮಾನನಷ್ಟ ಮತ್ತು ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
