ಎಕ್ಸಲೆಂಟ್ ಕಬ್ಸ್ ಶಾಲೆಯ ವಾರ್ಷಿಕ ಸಮ್ಮೇಳನದಲ್ಲಿ ನೇತ್ರ ತಜ್ಞ ಪ್ರಭುಗೌಡ ಬಿ.ಎಲ್. (ಚಬನೂರ) ಅಭಿಮತ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಗುವಿನ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಕರ ಜೊತೆಗೆ ಪಾಲಕರ ಪಾತ್ರವು ಬಹುಮುಖ್ಯವಾಗಿದೆ ಎಂದು ವಿಜಯಪುರ ಅನುಗ್ರಹ ಆಸ್ಪತ್ರೆಯ ನೇತ್ರ ತಜ್ಞ ಪ್ರಭುಗೌಡ ಬಿ.ಎಲ್. (ಚಬನೂರ) ಹೇಳಿದರು.
ಪಟ್ಟಣದ ಎಕ್ಸಲೆಂಟ್ ಕಬ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಜರುಗಿದ ಪ್ರಥಮ ವರ್ಷದ ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಗುವಿನ ಮನಸ್ಸು ಹದವಾದ ಮಣ್ಣಿನ ಮುದ್ದೆಯಂತೆ ಅದನ್ನು ತಿದ್ದಿ, ತಿಡಿ ಪ್ರತಿಮೆಯಾಗಿ ರೂಪಿಸುವ ಮೂಲಕ ಶಿಕ್ಷಕ ಹಾಗೂ ಪಾಲಕ ತಮ್ಮ ಜವಾಬ್ದಾರಿ ನಿರ್ವಹಿಸಬೇಕಾಗಿದೆ ಎಂದರು.
ಹಿರಿಯ ವೈದ್ಯ ಆರ್.ಆರ್.ನಾಯಿಕ್ ಮಾತನಾಡಿ, ಮಕ್ಕಳ ಅಭಿರುಚಿಗೆ ಅನುಗುಣವಾದ ಶಿಕ್ಷಣ ವ್ಯವಸ್ಥೆ ರೂಪಿಸುವ ಮೂಲಕ ಮಕ್ಕಳ ಭವಿಷ್ಯವನ್ನು ಕಟ್ಟುವ ಜವಾಬ್ದಾರಿ ಸರ್ಕಾರ, ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರ ಮೇಲಿದೆ ಎಂದರು .
ಸಮೃದ್ಧಿ ಸಹಕಾರ ಸಂಘದ ಉಪಾಧ್ಯಕ್ಷ ರಿಯಾಜ್ ಯಲಗಾರ ಮಾತನಾಡಿ, ಮಕ್ಕಳು ಶಾಲೆಯಿಂದ ಬಂದ ನಂತರ ಅವರೊಂದಿಗೆ ಪಾಲಕರು ಕನಿಷ್ಠ ಒಂದು ಗಂಟೆಯಾದರೂ ಕಾಲ ಕಳೆದು ದೈನಂದಿನ ಶಿಕ್ಷಣ ಚಟುವಟಿಕೆಗಳ ಕುರಿತು ಸಮಾಲೋಚಿಸಬೇಕು ಎಂದರು.
ಶಿಕ್ಷಕ ಸಾಹಿತಿ ಅಮೃತ ದೊಡ್ಡಮನಿ ಮಾತನಾಡಿದರು. ಡಾ.ಶಬಾನಾ ಎಮ್.ಎಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಕ್ಕಳು ಆಂಗ್ಲ ಭಾಷೆಯಲ್ಲಿ ಕಾರ್ಯಕ್ರಮ ನಿರ್ವಹಣೆ ಮಾಡುವುದರ ಜೊತೆಗೆ ಸುಂದರ ಸಾಂಸ್ಕೃತಿಕ ನೃತ್ಯ, ಗಾಯನಗಳ ಮೂಲಕ ಸಭಿಕರ ಗಮನ ಸೆಳೆದರು. ಕೊನೆಯಲ್ಲಿ ವೇದಿಕೆಯಲ್ಲಿದ್ದ ಗಣ್ಯರು ಮಕ್ಕಳಿಗೆ ನೆನಪಿನ ಕಾಣಿಕೆ ವಿತರಿಸಿದರು.
ಸಮೃದ್ಧಿ ಸಹಕಾರ ಸಂಘದ ನಿರ್ದೇಶಕ ಚಿನ್ಮಯ ಕೋರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಶೀರ್ ಅಹ್ಮದ್ ಬೇಪಾರಿ, ಅಂಜುಮನ್ ಕಮಿಟಿ ಅಧ್ಯಕ್ಷ ಮಹಿಬೂಬ್ ಹುಂಡೇಕಾರ, ತಾಲ್ಲೂಕು ಪಂಚಾಯಿತಿ ಮಾಜಿಅಧ್ಯಕ್ಷೆ ಲಲಿತಾ ದೊಡಮನಿ, ಜೆಡಿಎಸ್ ಧುರೀಣ ಮುನೀರ್ ಅಹ್ಮದ್ ಮಳಖೇಡ, ಪಟ್ಟಣ ಪಂಚಾಯಿತಿ ಸದಸ್ಯ ಕಾಶೀನಾಥ ಬಜಂತ್ರಿ, ಆನಂದ ಜಡಿಮಠ, ಮುರ್ತುಜಾ ತಾಂಬೋಳಿ, ರಫಿ ಮುಜಾವರ್ ಸೇರಿದಂತೆ ಸಿಬ್ಬಂದಿ ಹಾಗೂ ಪಾಲಕರು ಇದ್ದರು.

