ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಇಂಗಳೇಶ್ವರ ರಸ್ತೆಯಲ್ಲಿರುವ ನಾಗಾವಿ ಯಲ್ಲಮ್ಮದೇವಿ ಜಾತ್ರಾಮಹೋತ್ಸವ ಶುಕ್ರವಾರ ಸಂಭ್ರಮ, ಸಡಗರದಿಂದ ಜರುಗಿತು. ಜಾತ್ರೆಯಂಗವಾಗಿ ಪಲ್ಲಕ್ಕಿ ಉತ್ಸವದ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ತಾಯಿಜೋಗಮ್ಮರ ಕುಣಿತ, ವಿವಿಧ ವಾದ್ಯ ಮೇಳದೊಂದಿಗೆ ಸಂಭ್ರಮದಿಂದ ಜರುಗಿತು.
ನಾಗಾವಿ ಯಲ್ಲಮ್ಮ ದೇವಸ್ಥಾನದಿಂದ ಐದು ಕಳಸ ಹಾಗೂ ಪಲ್ಲಕ್ಕಿ ಉತ್ಸವವು ಪಟ್ಟಣದ ಬಸವೇಶ್ವರ ವೃತ್ತ, ಅಗಸಿ, ಮಹಾರಾಜರ ಮಠದ ಮಾರ್ಗ, ಬಸವಜನ್ಮ ಸ್ಮಾರಕ ಮಾರ್ಗ, ವಿಜಯಪುರ ಮಾರ್ಗವಾಗಿ ಪುನಃ ಬಸವೇಶ್ವರ ವೃತ್ತಕ್ಕೆ ಬಂದು ಬಸವೇಶ್ವರ ದೇವಸ್ಥಾನದ ಬಸವತೀರ್ಥ ಭಾವಿಗೆ ಆಗಮಿಸಿದ ನಂತರ ಗಂಗಾಸ್ಥಳ ಮಾಡಿಕೊಂಡ ನಂತರ ಡೊಳ್ಳು, ಚೌಡಕಿ ಸೇರಿದಂತೆ ಸುಮಂಗಲೆಯರ ಆರತಿಯೊಂದಿಗೆ ಬಸವೇಶ್ವರ ವೃತ್ತದ ಮಾರ್ಗವಾಗಿ ಇಂಗಳೇಶ್ವರ ರಸ್ತೆಯಲ್ಲಿರುವ ಯಲ್ಲಮ್ಮದೇವಿ ದೇವಸ್ಥಾನಕ್ಕೆ ಕಳಸಗಳು, ನಾಗಾವಿ ಯಲ್ಲಮ್ಮದೇವಿ ಪಲ್ಲಕ್ಕಿ ಉತ್ಸವ ತಲುಪಿತು. ಕಳಸಗಳಿಗೆ ಪೂಜೆ ನೆರವೇರಿಸಿದ ನಂತರ ದೇವಸ್ಥಾನಕ್ಕೆ ಕಳಸಗಳನ್ನು ಏರಿಸಲಾಯಿತು. ದೇವಸ್ಥಾನದಲ್ಲಿ ವಿಶೇಷ ಪೂಜೆ ಜರುಗಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಪಲ್ಲಕ್ಕಿ ಉತ್ಸವದ ಮೆರವಣಿಗೆಯಲ್ಲಿ ಪುರಸಭೆ ಉಪಾಧ್ಯಕ್ಷ ಅಶೋಕ ಹಾರಿವಾಳ, ಪುರಸಭೆ ಮಾಜಿ ಅಧ್ಯಕ್ಷ ಬಸಣ್ಣ ದೇಸಾಯಿ, ಹಣಮಂತ ನಾಯ್ಕೋಡಿ, ಮಲ್ಲೇಶಿ ಚಿಕ್ಕೂರ, ಚಂದ್ರಶೇಖರ ಕಲ್ಲೂರ, ರಾಮು ಕಟ್ಟಿಮನಿ, ಅಪ್ಪಾಸಾಹೇಬ ಕಲ್ಲೂರ ಸೇರಿದಂತೆ ಇತರರು ಭಾಗವಹಿಸಿದ್ದರು.

