ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ 5 ಲಕ್ಷ ರೂ. ಚೆಕ್ ವಿತರಿಸಿದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಬಬಲೇಶ್ವರ
ಉದಯರಶ್ಮಿ ದಿನಪತ್ರಿಕೆ
ಧಾರವಾಡ: ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ಕರ್ನಾಟಕ ಪೊಲೀಸ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಯನ್ನು ಪರಿಶೀಲಿಸಿದರು.
ಪೋಲಿಸ್ ಇಲಾಖೆಯ ಸಿಬ್ಬಂದಿಯ ಮಕ್ಕಳಿಗಾಗಿ ನಿರ್ಮಾಣಗೊಂಡಿರುವ ರಾಜ್ಯದ ಮೊದಲ ಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಪ್ರತಿಷ್ಠಿತ ಶಾಲೆಯ ವಿಶಿಷ್ಟ ಚಟುವಟಿಕೆಗಳ ಬಗ್ಗೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಬ್ಯಾಕೋಡ್ ರವರು ಅಧ್ಯಕ್ಷ ಬಬಲೇಶ್ವರ ಅವರಿಗೆ ಸಮಗ್ರ ಮಾಹಿತಿ ಒದಗಿಸಿದರು.
ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ ಬರಮನಿ, ಸಿಪಿಐ ಮುರುಗೇಶ್ ಚೆನ್ನಣ್ಣವರ್ ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಪರವಾಗಿ ಧಾರವಾಡ ಜಿಲ್ಲೆಯಾದ್ಯಂತ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಸಹಯೋಗದೊಂದಿಗೆ, “ಡ್ರಗ್ಸ್ ಅವೇರ್ನೆಸ್ ಪ್ರೋಗ್ರಾಮನ್ನು” ರೂಪಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಯಿತು.
ಗೃಹ ಸಚಿವರ ಸೂಚನೆಯ ಮೇರೆಗೆ 5 ಲಕ್ಷ ರೂಪಾಯಿಗಳ ಅನುದಾನದ ಚೆಕ್ಕನ್ನು ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಧ್ಯಕ್ಷ ಬಬಲೇಶ್ವರ ಹಸ್ತಾಂತರಿಸಿದರು.
ನಾಡಿನ ಪ್ರತಿಷ್ಠಿತ ಮತ್ತು ಏಕೈಕ ಪೊಲೀಸ್ ಮಕ್ಕಳ ವಸತಿ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಾರ್ಯವನ್ನು ಬಬಲೇಶ್ವರ ಮುಕ್ತ ಕಂಠದಿಂದ ಪ್ರಶಂಶಿಸಿದರು.

