ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ದಿಗಂಬರೇಶ್ವರ ಸಂಸ್ಥಾನ ಮಠದ ಆರಾಧ್ಯ ದೇವ ದಿಗಂಬರೇಶ್ವರ ಜಾತ್ರಾ ಮಹೋತ್ಸವವು ದವನದ ಹುಣ್ಣಿಮೆಯ ದಿನವಾದ ಏ. ೧೨ ಶನಿವಾರದಿಂದ ೧೬ ಬುಧವಾರದವರೆಗೆ ಐದು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ಜರಗುವದು.
ದಿನಾಂಕ ೧೨ ಶನಿವಾರ ಬೆಳಿಗ್ಗೆ ೬ ಘಂಟೆಗೆ ಜಗದ್ಗುರು ದಿಗಂಬರೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ನೂರಾರು ಭಕ್ತರು ದೀರ್ಘದಂಡ ನಮಸ್ಕಾರ ಹಾಕುವರು, ಮದ್ಯಾಹ್ನ ಸಕಲವಾದ್ಯ ವೈಭವದೊಂದಿಗೆÀ ಬಿರುದಾವಳಿಗಳೊಂದಿಗೆ ಪಲ್ಲಕ್ಕಿ ಉತ್ಸವ ಬೀಳಗಿ ತಾಲೂಕಿನ ಢವಳೇಶ್ವರ ಗ್ರಾಮದ ಭಕ್ತರು ತರುವ ರಥೋತ್ಸವದ ಹಗ್ಗದ ಮೆರವಣಿಗೆ ಮಠಕ್ಕೆ ಆಗಮಿಸಿದಾಗ ಸಾಯಂಕಾಲ ೫.೩೦ಕ್ಕೆ ರಥೋತ್ಸವ ಜರುಗುವದು. ಗೀಗಿ ಪದಗಳು ಪ್ರತಿ ದಿನ ಸಾಯಂಕಾಲ ೭ ರಿಂದ ೯ರ ವರೆಗೆ ಮಠದ ಆವರಣದಲ್ಲಿ ನಡೆಯುವವವು.
ದಿನಾಂಕ ೧೩ ರವಿವಾರ ಮದ್ಯಾಹ್ನ ೧೨ ಘಂಟೆಗೆ ಶ್ರೀಶೈಲ ಶಿವಶಂಕ್ರೆಪ್ಪ ನೀಲವಾಣಿ ಇವರ ಮನೆಯಲ್ಲಿ ಕಲ್ಲಿನಾಥ ದೇವರ ಬಿನ್ನಹ ಹಾಗೂ ಪಲ್ಲಕ್ಕಿ ಉತ್ಸವ ನಡೆದು ಮಹಾಪ್ರಸಾದ ಪಂತಿ ಜರುಗುವದು. ಸಾಯಂಕಾಲ ೪.೩೦ಕ್ಕೆ ಯುವಕರಿಗಾಗಿ ಹಾಲೋಕಳಿ ಸ್ಪರ್ದೆಯು ಇರುವದು ವಿಜೇತರಾದವರಿಗೆ ಬೆಳ್ಳಿ ಖಡಗ ಬಹುಮಾನವಾಗಿ ದೊರಕುವದು.
ದಿನಾಂಕ ೧೪ ಸೋಮವಾರ ಮುಂಜಾನೆ ೮ ಘಂಟೆಗೆ ಎತ್ತಿನಗಾಡಿ ಓಟದ ಸ್ಪರ್ದೆ, ರಾತ್ರಿ ೭ಕ್ಕೆ ಚಿತ್ರವಿಚಿತ್ರ ಮದ್ದು ಸುಡುವ ಕಾರ್ಯಕ್ರಮ, ದಿನಾಂಕ ೧೫ ಮಂಗಳವಾರ ಮುಂಜಾನೆ ೮ ಘಂಟೆಗೆ ಪುರುಷರಿಗಾಗಿ ಸೈಕಲ್ ಸ್ಪರ್ಧೆ ಇರುವದು.
ದಿನಾಂಕ ೧೬ ಬುಧವಾರ ದಿವಸ ಮುಂಜಾನೆ ೧೦ ಗಂಟೆಗೆ ವಿಜಯಪೂರ ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿ ಇವರ ಸಹಯೋಗದೊಂದಿಗೆ ಐದು ದಿನ ಜರುಗುವ ಜಾತ್ರೆಯಲ್ಲಿ ಸುತ್ತಮುತ್ತಲಿನ ದೂರದ ಊರುಗಳಿಂದ ಆಗಮಿಸಿದ ದನದ ಜಾತ್ರೆಯಲ್ಲಿ ಪಾಲ್ಗೊಂಡ ಉತ್ತಮ ಜಾನುವಾರುಗಳಿಗೆ ಚಿನ್ನದ ಪದಕ ಹಾಗೂ ಬಹುಮಾನವನ್ನು ನೀಡಲಾಗುವದು. ಸಂಜೆ ೫ ಘಂಟೆಗೆ ಕಳಸ ಇಳಿಸುವುದರೊಂದಿಗೆ ಜಾತ್ರೆ ಮಂಗಲಗೊಳ್ಳುವುದು, ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಮತ್ತು ದನಗಳ ಮಾಲಿಕರಿಗೆ ಮಠದ ವತಿಯಿಂದ ಗೌರವಿಸಲಾಗುವದು ಎಂದು ಪ್ರಕಟಣೆ ತಿಳಿಸಿದೆ.