ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಬರುವ ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸಂಕನಾಳ ಎಲ್ಟಿ ಗ್ರಾಮದಲ್ಲಿ ೨೦೨೪-೨೫ನೇ ಸಾಲಿನ ಪ್ರಗತಿ ಕಾಲನಿ ಯೋಜನೆಯಡಿಯಲ್ಲಿ ಕೈಗೊಂಡಿರುವ ಸಿಸಿ ರಸ್ತೆ ಕಾಮಗಾರಿಯು ಕಳಪೆಯಿಂದ ಕೂಡಿದೆ ಎಂದು ಹುಣಶ್ಯಾಳ ಪಿಬಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಪ್ಪು ವಿಠ್ಠಲ ನಾಯಕ ಆರೋಪಿಸಿದ್ದಾರೆ.
ತಾಲೂಕಿನ ಸಂಕನಾಳ ಎಲ್ಟಿ ಗ್ರಾಮದಲ್ಲಿ ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಚೆಗೆ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ರೂರಲ್ ಇನ್ಪ್ರಾಸ್ಪ್ರಕ್ಟರ್ ಡೆವಲಪಮೆಂಟ್ ಲಿಮಿಟೆಡ್ ಇಲಾಖೆಯಡಿ ರೂ. ೫೦ ಲಕ್ಷ ಅನುದಾನದಲ್ಲಿ ಸಂಕನಾಳ ಗ್ರಾಮದ ಎಲ್ಟಿ ಕಾಲನಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ರಸ್ತೆ ಕಾಮಗಾರಿಯ ಗುತ್ತಿಗೆದಾರರು ಕೆಲಸ ಆರಂಭಿಸಿದರೂ ಕಾಮಗಾರಿಯ ಅಂದಾಜು ಪತ್ರಿಕೆಯಂತೆ ಆರು ಇಂಚು ದಪ್ಪ ರಸ್ತೆ ನಿರ್ಮಾಣ ಮಾಡದೇ ರಸ್ತೆ ಎರಡು ಬದಿ ಮಾತ್ರ ಆರು ಇಂಚು ಕಾಣುವಂತೆ ಮಾಡಿ ನಡುವೆ ಇದರ ಪ್ರಮಾಣ ಕಡಿಮೆ ಮಾಡಿರುವದರಿಂದಾಗಿ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದೆ. ಇದರ ಬಗ್ಗೆ ಕರ್ನಾಟಕ ರೂರಲ್ ಇನ್ಪ್ರಾಸ್ಪ್ರಕ್ಟರ್ ಡೆವಲಪಮೆಂಟ್ ಲಿಮಿಟೆಡ್ ಇಲಾಖೆಯ ತಾಲೂಕಿನ ಇಇ ಅವರ ಗಮನಕ್ಕೆ ತಂದಾಗ ಅವರು ತಮ್ಮ ಸೆಕ್ಷನ್ ಅಧಿಕಾರಿಯೊಂದಿಗೆ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದ್ದನ್ನು ಗಮನಿಸಿ ಕಳಪೆ ಇರುವ ಕಾಮಗಾರಿಯನ್ನು ಕಿತ್ತಿಸಿ ಸರಿಯಾಗಿ ಕಾಮಗಾರಿಯನ್ನು ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ. ಹದಿನೈದು ದಿನಗಳಾದರೂ ಗುತ್ತಿಗೆದಾರರು ಈ ಕಾಮಗಾರಿಯನ್ನು ಮಾಡದೇ ಇರುವದರಿಂದಾಗಿ ಈ ರಸ್ತೆಯಲ್ಲಿ ಸಂಚಾರ ಮಾಡುವವರಿಗೆ ತೀವ್ರ ತೊಂದರೆಯಾಗುತ್ತಿದೆ. ಇದರ ಹಿಂದೆ ಮಾಡಿದ ರಸ್ತೆಗೂ ಸರಿಯಾಗಿ ನೀರು ಹೊಡೆದಿಲ್ಲ. ಕೂಡಲೇ ಗುತ್ತಿಗೆದಾರರು ಈ ರಸ್ತೆ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಮಾಡುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಸಂಕನಾಳ ಎಲ್ಟಿ ನಿವಾಸಿ ಗುರುಬಾಯಿ ರಾಠೋಡ ಅವರು, ನಮ್ಮ ಮನೆಯ ಮುಂದೆ ಮಾಡಿರುವ ರಸ್ತೆಯನ್ನು ಒಡೆದು ಹಾಕಿರುವದರಿಂದಾಗಿ ನಮಗೆ ಅಡ್ಡಾಡಲು ತೊಂದರೆಯಾಗುತ್ತಿದೆ. ನಮ್ಮ ಅಜ್ಜಿ ರತ್ನಾಬಾಯಿ ಅವರು ಈಚೆಗೆ ರಾತ್ರಿ ಮನೆಗೆ ಬರುವಾಗ ಬಿದ್ದು ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ನಮಗೂ, ಮಕ್ಕಳಿಗೂ ಸಂಚಾರ ಮಾಡಲು ತುಂಬಾ ತೊಂದರೆಯಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ರಸ್ತೆ ಸುಧಾರಣೆ ಮಾಡಬೇಕೆಂದರು.
ಈ ಸಂದರ್ಭದಲ್ಲಿ ಅನಿಲ ರಾಠೋಡ, ಜೈರಾಮ ರಾಠೋಡ, ಗುಂಡು ರಾಠೋಡ, ಶಾರುಬಾಯಿ ಚವ್ಹಾಣ ಇದ್ದರು.