ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಣೆ
ಅಹಮದಾಬಾದ್: ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧದ ಹೋರಾಟವನ್ನು ‘ಎರಡನೇ ಸ್ವಾತಂತ್ರ್ಯ ಸಂಗ್ರಾಮ’ ಎಂದು ಕರೆದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೋದಿ ಸರ್ಕಾರ ಕೋಮುವಾದ, ಅನ್ಯಾಯ ಮತ್ತು ಅಸಮಾನತೆಯನ್ನು ಶಾಶ್ವತಗೊಳಿಸುತ್ತಿದೆ ಎಂದು ಆರೋಪಿಸಿದರು.
ಎಐಸಿಸಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಮೋದಿ ಸರ್ಕಾರವನ್ನು ವಸಾಹತುಶಾಹಿ ಆಡಳಿತದೊಂದಿಗೆ ಹೋಲಿಸಿದರು. ಈ ಹಿಂದೆ ಬ್ರಿಟಿಷರು ಮಾಡಿದಂತೆ ಈ ಸರ್ಕಾರವೂ ಕೋಮುವಾದವನ್ನು ಬಳಸಿಕೊಳ್ಳುತ್ತಿದೆ. ಆದರೆ ಇದರ ವಿರುದ್ಧ ಕಾಂಗ್ರೆಸ್ ಹೋರಾಡಿ ಗೆಲ್ಲುತ್ತದೆ ಎಂದು ಪ್ರತಿಜ್ಞೆ ಮಾಡಿದರು.
ಬಿಜೆಪಿಯ ಹನ್ನೊಂದು ವರ್ಷಗಳ ಆಡಳಿತವನ್ನು ಟೀಕಿಸಿದ ಅವರು, ಸಂವಿಧಾನದ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ, ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗುತ್ತಿದೆ. ವಿರೋಧ ಪಕ್ಷಗಳ ಧ್ವನಿ ಹತ್ತಿಕ್ಕಲಾಗುತ್ತಿದೆ. ರಾಹುಲ್ ಗಾಂಧಿಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನಿರಾಕರಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಚುನಾವಣಾ ಆಯೋಗ(ಇಸಿ) ಸೇರಿದಂತೆ ಯಾವುದೇ ಸಂಸ್ಥೆಯೂ ಪ್ರಧಾನಿಯಡಿ ಸುರಕ್ಷಿತವಾಗಿಲ್ಲ. ವಿರೋಧ ಪಕ್ಷಗಳನ್ನು ಸೋಲಿಸಲು ಸಂಪೂರ್ಣ ಇವಿಎಂ ವ್ಯವಸ್ಥೆಯನ್ನು ಬಿಜೆಪಿ ವಿನ್ಯಾಸಗೊಳಿಸಿದೆ. ಚುನಾವಣಾ ವಂಚನೆ ನಡೆಯುತ್ತಿದೆ. ಅಭಿವೃದ್ಧಿ ಹೊಂದಿದ ದೇಶಗಳು ಬ್ಯಾಲೆಟ್ ಪೇಪರ್‌ಗಳಿಗೆ ಮರಳಿವೆ, ಆದರೆ ನಾವು ಮಾತ್ರ ಇವಿಎಂಗಳನ್ನು ಬಳಸುತ್ತಿದ್ದೇವೆ ಎಂದು ಹೇಳಿದರು.
ಇದೆಲ್ಲವೂ ವಂಚನೆಯಾಗಿದೆ. ಅವರು ಪುರಾವೆಗಳನ್ನು ಕೇಳುತ್ತಿದ್ದಾರೆ. ಆದರೆ ತಮ ವಿರೋಧಿಗಳನ್ನು ಸೋಲಿಸಲು ಈ ಸಂಪೂರ್ಣ ತಂತ್ರವನ್ನು ರಚಿಸಲಾಗಿದೆ ಎಂದು ನಾನು ಹೇಳುತ್ತೇನೆ ಎಂದರು.
ವಿಮಾನ ನಿಲ್ದಾಣಗಳು, ಬಂದರುಗಳು, ಗಣಿಗಾರಿಕೆ, ಮಾಧ್ಯಮ – ಎಲ್ಲವನ್ನೂ ಕೈಗಾರಿಕೋದ್ಯಮಿ ಸ್ನೇಹಿತರಿಗೆ ಹಸ್ತಾಂತರಿಸಲಾಗುತ್ತಿದೆ. ಇದು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದಿದೆ. ನಿರುದ್ಯೋಗದಿಂದ ಪಾರಾಗಲು ಶ್ರೀಮಂತರು ಮತ್ತು ಯುವಕರು ದೇಶ ತೊರೆಯುತ್ತಿದ್ದಾರೆ. ಶ್ರೀಮಂತರು ವಿದೇಶದಲ್ಲಿ ನೆಲೆಸುತ್ತಿದ್ದಾರೆ. ನಿರುದ್ಯೋಗದಿಂದ ಪಾರಾಗಲು ವಿದೇಶಕ್ಕೆ ಹೋದ ಯುವಕರನ್ನು ಸರಪಳಿಯಲ್ಲಿ ಬಂಧಿಸಿ ವಾಪಸ್ ಕಳುಹಿಸಲಾಗುತ್ತಿದೆ ಆದರೂ ಪ್ರಧಾನಿ ನರೇಂದ್ರಮೋದಿ ಮೌನವಾಗಿದ್ದಾರೆ ಎಂದು ಕಿಡಿಕಾರಿದರು.
ಇನ್ನು ವಿದೇಶಾಂಗ ನೀತಿಯ ಬಗ್ಗೆಯೂ ತೀವ್ರ ಕಳವಳ ವ್ಯಕ್ತಪಡಿಸಿದ ಖರ್ಗೆ, ಭಾರತೀಯ ಆಮದುಗಳ ಮೇಲೆ ಅಮೆರಿಕ ಶೇಕಡಾ 26 ರಷ್ಟು ಸುಂಕ ವಿಧಿಸುತ್ತಿದೆ. ಆದರೆ ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಲಿಲ್ಲ ಎಂದು ಅವರು ಹೇಳಿದರು.

ದೇಶದ ಆರ್ಥಿಕತೆಯಲ್ಲಿ ಏಕಸ್ವಾಮ್ಯ ಸ್ಥಾಪನೆ
ದೇಶದ ಆರ್ಥಿಕತೆಯಲ್ಲಿ ಏಕಸ್ವಾಮ್ಯವನ್ನು ಸ್ಥಾಪಿಸಲಾಗುತ್ತಿದ್ದು, ಸಾರ್ವಜನಿಕ ಆಸ್ತಿಗಳನ್ನು ಖಾಸಗಿಯವರಿಗೆ ಹಸ್ತಾಂತರಿಸಲಾಗುತ್ತಿದೆ. ಮುಂದೊಂದು ದಿನ ಈ ದೇಶವನ್ನೇ ಮಾರಿ ಬಿಡುತ್ತಾರೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬುಧವಾರ ವಾಗ್ದಾಳಿ ನಡೆಸಿದ್ದಾರೆ.
ಅಹಮದಾಬಾದ್‌ನಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧಿವೇಶನದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೇಶದ ಆರ್ಥಿಕತೆಯಲ್ಲಿ ಏಕಸ್ವಾಮ್ಯವನ್ನು ಸ್ಥಾಪಿಸಲಾಗುತ್ತಿದೆ. ಸಾರ್ವಜನಿಕ ಆಸ್ತಿಗಳನ್ನು ಖಾಸಗಿಯವರಿಗೆ ಹಸ್ತಾಂತರಿಸಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ (ಇಡಬ್ಲ್ಯೂಎಸ್) ಮೀಸಲಾತಿಗೆ ಹೊಡೆತ ಬಿದ್ದಿದೆ. ಉದ್ಯೋಗ ಒದಗಿಸುವ ಉದ್ದೇಶ ಸರ್ಕಾರಕ್ಕಿಲ್ಲ. ಹೀಗಾಗಿ ಸಾರ್ವಜನಿಕ ವಲಯವನ್ನು ಒಂದೊಂದಾಗಿ ಮಾರಾಟ ಮಾಡುತ್ತಿದ್ದಾರೆ. ಈ ಮೂಲಕ ಅವರ ಸ್ನೇಹಿತರಿಗೆ ಸಹಾಯ ಮಾಡುತ್ತಿದ್ದಾರೆ. ಈ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮುಂದೊಂದು ದಿನ ಮೋದಿಯವರು ಈ ದೇಶವನ್ನೇ ಮಾರಿ ಬಿಡುತ್ತಾರೆಂದು ಕಿಡಿಕಾರಿದರು,