ಶರಣ ಮಡಿವಾಳ ಮಾಚಿದೇವ ಬಸ್ ನಿಲ್ದಾಣ ಉದ್ಘಾಟನೆ | ಕ.ಕ.ರ. ಸಾರಿಗೆ ಇಲಾಖೆಯ ಅಧಿಕಾರಿಗಳಿಂದ ಬೇಕಾಬಿಟ್ಟಿ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಬಸವಣ್ಣನ ಸಮಕಾಲೀನ ಶರಣ ಮಡಿವಾಳ ಮಾಚಿದೇವ ಒಬ್ಬ ಆದರ್ಶ ವ್ಯಕ್ತಿ, ಅವರ ಪ್ರತಿಮೆ ಸ್ಥಾಪನೆ ಅತ್ಯಗತ್ಯ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ನೂತನವಾಗಿ ನಿರ್ಮಾಣಗೊಂಡ ಶರಣ ಮಡಿವಾಳ ಮಾಚಿದೇವ ಬಸ್ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಡಿವಾಳ ಹೆಸರಲ್ಲಿ ರಾಜ್ಯದಲ್ಲಿ ಹಲವಾರು ಸ್ಥಳಗಳಿವೆ. ಇಂದು ಬಸ್ ನಿಲ್ದಾಣಕ್ಕೆ ಮಾಚಿದೇವರ ಹೆಸರು ನಾಮಕರಣಗೊಳಿಸುವಂತೆ ದೇವರಹಿಪ್ಪರಗಿ ಬಳಗ ಹಲವು ದಿನಗಳ ಹಿಂದೆಯೇ ನನ್ನನ್ನು ಬೇಟಿಯಾಗಿ ಮನವಿ ಮಾಡಿತ್ತು ಎಂದು ಹೇಳುತ್ತಾ, ರಾಜ್ಯದ ಜನತೆಗೆ ಬಸ್‌ಗಳ ಕೊರತೆ ಕಾಡುತ್ತಿದೆ ಆದ್ದರಿಂದ ನೂತನವಾಗಿ ೮೦೦ ಬಸ್‌ಗಳನ್ನು ಇಲಾಖೆಗೆ ನೀಡಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಮಾತನಾಡಿ, ಹಿಂದಿನ ಸರ್ಕಾರದ ಅವಧಿಯಲ್ಲಿಯೇ ಬಸ್ ನಿಲ್ದಾಣದ ಶಂಕುಸ್ಥಾಪನೆಯೊಂದಿಗೆ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಸಚಿವರು ಬಸ್ ನಿಲ್ದಾಣದ ಆವರಣದಲ್ಲಿ ಮಾಚಿದೇವರ ಪ್ರತಿಮೆ ಸ್ಥಾಪನೆಗೆ ಹಾಗೂ ಬಸ್ ಡಿಪೋ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಸಿಂದಗಿ ಪಟ್ಟಣದಿಂದ ಮೂವರು ಶಾಸಕರುಗಳಿಗೆ ಅನುಕೂಲವಾಗುವಂತೆ ಕಲ್ಯಾಣರಥ ಬಸ್ ಓಡಿಸಲು ವಿನಂತಿಸಿದರು.
ಕ.ಕ.ರ.ಸಾ. ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಮ್.ರಾಚಪ್ಪ ಪ್ರಸ್ತಾವಿಕವಾಗಿ ಮಾತನಾಡಿ, ೧.೧೬ ಎಕರೆ ಜಾಗದಲ್ಲಿ ೪.೯೫ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಬಸ್ ನಿಲ್ದಾಣದಲ್ಲಿ ೧೬ ಬಸ್ ನಿಲುಗಡೆಗಡೆಗಳಿವೆ. ನಿತ್ಯ ೮೦೦ ಬಸ್‌ಗಳ ಓಡಾಟವಿದೆ ಎಂದರು.
ಸಾನಿಧ್ಯ ವಹಿಸಿದ್ದ ಸ್ಥಳೀಯ ಸದಯ್ಯನಮಠದ ವೀರಗಂಗಾಧರಶ್ರೀಗಳು ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಸಚಿವರು ದೇವರಹಿಪ್ಪರಗಿ ಗೆಳೆಯರ ಬಳಗದ ಸುರೇಶ ದೇಸಾಯಿ ಅವರನ್ನು ಸನ್ಮಾನಿಸಿದರು.
ನಾಗಠಾಣ ಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ, ಇಂಡಿ ಉಪವಿಭಾಗಾಧಿಕಾರಿ ಅನುರಾಧ ವಸ್ತ್ರದ, ತಹಶೀಲ್ದಾರ ಪ್ರಕಾಶ ಸಿಂದಗಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ದೇವಣಗಾಂವ, ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಬಿ.ಕೆ.ಪಾಟೀಲ, ಬಿ.ಎಂ.ಪಾಟೀಲ, ಸದಾನಂದ ಬಬಲೇಶ್ವರ, ರಿಯಾಜ್ ಯಲಗಾರ, ಸಿ.ಕೆ.ಕುದರಿ, ಎ.ಕೆ.ನಾಡಗೌಡ, ಆರ್.ಆರ್.ಮಣೂರ, ಬಷೀರ್‌ಅಹ್ಮದ್ ಬೇಪಾರಿ ಸಹಿತ ದೇವರಹಿಪ್ಪರಗಿ ಗೆಳೆಯರ ಬಳಗದ ಸದಸ್ಯರು, ಸಾರಿಗೆ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಇದ್ದರು.
ಕಾರ್ಯಕ್ರಮದಲ್ಲಿ ಅಧಿಕಾರಿಗಳ ಎಡವಟ್ಟುಗಳು
- ಪ್ರೋಟೊಕಾಲ್ ನೆಪದಲ್ಲಿ ನೂತನ ಬಸ್ ನಿಲ್ದಾಣಕ್ಕೆ ಕಾರಣರಾದ ಮಾಜಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಅವರನ್ನು ಆಮಂತ್ರಿಸದೇ ಮರೆತದ್ದು..
- ಆಮಂತ್ರಣ ಪತ್ರಿಕೆಯಲ್ಲಿ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮುದ್ರಿಸಿದ್ದು..
- ಆಮಂತ್ರಣ ಪತ್ರಿಕೆಯಲ್ಲಿ ಸ್ಥಳೀಯ ತಹಶೀಲ್ದಾರ, ಪಪಂ ಉಪಾಧ್ಯಕ್ಷ, ಮುಖ್ಯಾಧಿಕಾರಿ ಹೆಸರೇ ಮಾಯ..
- ಸ್ಥಳೀಯರ ನಿರ್ಲಕ್ಷ್ಯ
- ಸಾರಿಗೆ ಅಧಿಕಾರಿಗಳಿಗೆ ಮೀಸಲಾದ ಕಾರ್ಯಕ್ರಮ