ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: 12 ನೇ ಶತಮಾನದ ಶರಣೆ ಅಕ್ಕಮಹಾದೇವಿಯ ದಿಟ್ಟನಿಲುವು ಹಾಗೂ ಧೈರ್ಯ ಮಹಿಳೆಯರಿಗೆ ಇಂದಿಗೂ ಸ್ಪೂರ್ತಿಯಾಗಿ ನಿಲ್ಲುತ್ತದೆ ಎಂದು ಸ್ಥಳೀಯ ಸರಕಾರಿ ಪದವಿ ಕಾಲೇಜಿನ ಇತಿಹಾಸದ ಉಪನ್ಯಾಸಕಿ ವಿಜಯಲಕ್ಷ್ಮಿ ರೊಟ್ಟಿ ಹೇಳಿದರು.
ಪಟ್ಟಣದ ವಿರಕ್ತ ಮಠದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ, ವಿರಕ್ತಮಠ ಹಾಗೂ ವಿವಿಧ ಮಹಿಳಾ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವೈರಾಗ್ಯ ನಿಧಿ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಅಕ್ಕನ ವಚನಗಳು ಎತ್ತರ ಮಟ್ಟದಲ್ಲಿವೆ. ಅವರ ಒಂದೊಂದು ವಚನಗಳು ಅನುಭವದ ಆಧಾರದಲ್ಲಿ ಮೂಡಿ ಬಂದಿದೆ. ಎಂದು ಹೇಳಿದರು.
ಕಾಮವನ್ನು ಗೆದ್ದ ಅಕ್ಕ ದೈವತ್ವದ ಕಡೆಗೆ ಹೋಗಬೇಕಾದರೆ ಸಾಕಷ್ಟು ನೋವುಗಳನ್ನು ಅನುಭವಿಸಿದರು. ಧೈರ್ಯ ಸಾಹಸಕ್ಕೆ ಅಕ್ಕ ನಮಗೆಲ್ಲರಿಗೂ ಇಂದಿಗೂ ಮಾರ್ಗದರ್ಶಕರಾಗಿ ನಿಲ್ಲುತ್ತಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಜಗದೇವಿ ಗುಂಡಳ್ಳಿ ಮಾತನಾಡಿ, 12ನೇ ಶತಮಾನದ ಶರಣರು ಶರಣೆಯರ ವಚನಗಳು ಇಂದಿಗೂ ಪ್ರಸ್ತುತವಾಗಿ ನಿಲ್ಲುತ್ತವೆ. ಯುವ ಜನಾಂಗ ಮೊಬೈಲ್ ದಾಸರಾಗಿ ವ್ಯಕ್ತಿತ್ವವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಶರಣರ ವಿಚಾರಗಳನ್ನು ನೈತಿಕ ಮೌಲ್ಯಗಳನ್ನು ತಿಳಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಸಾನಿದ್ಯ ವಹಿಸಿದ್ದ ವಿರಕ್ತ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಅಕ್ಕಮಹಾದೇವಿ ಕನ್ನಡ ನಾಡಿನ ಮೊದಲ ಕವಯತ್ರಿಯಾಗಿ ಅವರು ರಚಿಸಿದ ವಚನಗಳು ಅಧ್ಯಾತ್ಮ ಲೋಕದ ಎತ್ತರಕ್ಕೆ ನಮ್ಮನ್ನು ಕೊಂಡೊಯ್ಯುತ್ತವೆ. ಅವಳ ಆದರ್ಶ ಅವರ ಬದುಕಿದ ಹೋರಾಟ ನಮಗೆಲ್ಲ ಸ್ಪೂರ್ತಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ದೇಶಿಸಿ ಕದಳಿ ವೇದಿಕೆಯ ಕವಿತಾ ಮರ್ತುರ ಮಾತನಾಡಿದರು.
ವೇದಿಕೆ ಮೇಲೆ ಮಹಾದೇವಿ ಬಿರಾದಾರ ಸುರೇಖಾ ಉಪಾಧ್ಯಾಯ, ಪೂರ್ಣಿಮಾ ಚೌಧರಿ, ಅಂಬುತಾಯಿ ಮಿಣಜಗಿ, ಪಾರ್ವತಿ ಕೊಟ್ರಶೆಟ್ಟಿ ,ಸುನೀತಾ ಕೊಟ್ರಶೆಟ್ಟಿ, ಡಾ ವೀಣಾ ಗುಳೇದಗುಡ್ಡ, ಗೀತಾ ಕಾಳಹಸ್ತೇಶ್ವರಮಠ ಉಪಸ್ಥಿತರಿದ್ದರು. ಪುಷ್ಪ ಹೂಗಾರ ಸ್ವಾಗತ ಗೀತೆ ಹಾಡಿದರು.
ಮೀರಾಂಬಿಕಾ ಅಳ್ಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕವಿತಾ ದುಂಬಾಳಿ ಸ್ವಾಗತಿಸಿದರು. ಗೀತಾ ಚಿಂಚೋಳಿ ನಿರೂಪಿಸಿದರು. ಪಾರ್ವತಿ ಚೌಕಿಮಠ ವಂದಿಸಿದರು.
ಇದೇ ಸಂದರ್ಭದಲ್ಲಿ ಕುಮಾರಿ ಪ್ರತಿಭಾ ಹಡಪದವರಿಂದ ವಚನ ನೃತ್ಯ ಕಾರ್ಯಕ್ರಮ ನಡೆಯಿತು.