ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಕರ್ನಾಟಕ ರಾಜ್ಯ ಸರ್ಕಾರ ಜಾತಿ ಗಣತಿಯನ್ನು ಅವೈಜ್ಞಾನಿಕವಾಗಿ ಮಾಡಿದೆ. ಉದ್ದೇಶಪೂರ್ವಕವಾಗಿ ಲಿಂಗಾಯತರ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ರಾಜ್ಯದ ಶೇ. 20ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಲಿಂಗಾಯತ ಸಮುದಾಯವನ್ನು ತುಳಿಯುವ ಹುನ್ನಾರ ರಾಜ್ಯ ಸರ್ಕಾರದ್ದಾಗಿದೆ. ಮನೆ ಮನೆಗೆ ಬಂದು ಸರಿಯಾಗಿ ವರದಿಯನ್ನು ತಯಾರಿಸಿಲ್ಲ. ಯಾರನ್ನೋ ಮೆಚ್ಚಿಸುವ ಸಲುವಾಗಿ ಮುಖ್ಯಮಂತ್ರಿ ತುರಾತುರಿಯಿಂದ ವರದಿ ಮಂಡಿಸಲು ಹೊರಟಿದ್ದಾರೆ. ಈ ವರದಿಯನ್ನು ತಿರಸ್ಕರಿಸಿ ಮತ್ತೊಮ್ಮೆ ವರದಿಯನ್ನು ತಯಾರಿಸಬೇಕು.ಏ. 17 ರಂದು ನಡೆಯುವ ಮಂತ್ರಿಮಂಡಲದ ವಿಶೇಷ ಸಭೆಯಲ್ಲಿ ಜಿಲ್ಲೆಯ ಉಭಯ ಸಚಿವರು ವರದಿಯನ್ನು ವಿರೋಧಿಸುವ ಮೂಲಕ ವರದಿ ಜಾರಿಯಾಗುವದನ್ನು ತಪ್ಪಿಸಬೇಕೆಂದು ಬಸವನಬಾಗೇವಾಡಿ ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯಾಧ್ಯಕ್ಷ ವಿವೇಕಾನಂದ ಕಲ್ಯಾಣಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.