ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಆಲಮಟ್ಟಿ ಜಲಾಶಯದ 26 ಗೇಟ್ಗಳ ಮೂಲಕ ನೀರು ಬಿಟ್ಟಿದ್ದನ್ನು ಖಂಡಿಸಿ ರೈತರು ಸೋಮವಾರ ಕೃಷ್ಣಾ ನದಿಯಲ್ಲಿ ಇಳಿದು ಪ್ರತಿಭಟಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ನಾರಾಯಣಪುರ ಜಲಾಶಯಕ್ಕೆ ನೀರು ಬಿಟ್ಟಿದ್ದನ್ನು ಖಂಡಿಸಿ ನೀರಿಗಿಳಿದು ಪ್ರತಿಭಟಿಸಿದರು.
ಸರ್ಕಾರದ ವಿರುದ್ಧ ಹಾಗೂ ಜಲಸಂಪನ್ಮೂಲ ಸಚಿವರ ವಿರುದ್ಧ ಘೋಷಣೆ ಕೂಗಿದರು.
ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಜಿಲ್ಲೆಗೆ ಕುಡಿಯುವ ನೀರಿಗೂ, ಕೆರೆಗಳ ಭರ್ತಿಗೂ ನೀರು ಹರಿಸಲು ಅಧಿಕಾರಿಗಳು ಮೀನಮೇಷ ಎಣಿಸುತ್ತಾರೆ, ಆದರೆ ನಾರಾಯಣಪುರ ಜಲಾಶಯಕ್ಕೆ ಬೇಕಾಬಿಟ್ಟಿ ನೀರು ಹರಿಸುತ್ತಾರೆ ಎಂದು ಆಪಾದಿಸಿದರು. ಜಿಲ್ಲೆಯ ಕೆರೆಗಳ ಭರ್ತಿಗೆ ನೀರು ಹರಿಸುವರೆಗೂ ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ, ನಾರಾಯಣಪುರ ಜಲಾಶಯಕ್ಕೆ ಹರಿಸುವ ನೀರಿನ ಅಗತ್ಯ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಅವಳಿ ಜಿಲ್ಲೆಯ ಬಗ್ಗೆ ಅಧಿಕಾರಿಗಳ ಹಾಗೂ ಸರ್ಕಾರದ ನಿರ್ಲಕ್ಷ ಖಂಡಿಸಿ ಈ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಆಗಮಿಸಿದ ಕೆಬಿಜೆಎನ್ಎಲ್ ಅಧಿಕಾರಿಗಳು, ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ರೈತರು ನೀರು ಹರಿಸಿದ್ದನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧೀಕ್ಷಕ ಅಭಿಯಂತರ ವಿ.ಆರ್. ಹಿರೇಗೌಡರ, ನಾರಾಯಣಪುರ ಜಲಾಶಯಕ್ಕೆ ಬಿಡಬೇಕಿದ್ದ 2 ಟಿಎಂಸಿ ನೀರನ್ನು ಕಳೆದ ಶನಿವಾರದಿಂದಲೇ ಬಿಡಲಾಗುತ್ತಿದೆ. ಸೋಮವಾರ ರಾತ್ರಿ 10 ಗಂಟೆಯೊಳಗೆ ನೀರು ಹರಿಸಬೇಕಿದ್ದ ಕಾರಣ ಜಲಾಶಯದ ಎಲ್ಲಾ 26 ಗೇಟ್ ಗಳ ಮೂಲಕ ನೀರು ಬಿಡಲಾಗುತ್ತಿದೆ, ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ ಎಂದರು. ಸೋಮವಾರ ರಾತ್ರಿ 10 ಗಂಟೆಯ ನಂತರ ಹೊರಹರಿವು ಸ್ಥಗಿತಗೊಳ್ಳಲಿದೆ ಎಂದರು.
ಸೋಮವಾರ ಸಂಜೆಯಿಂದಲೇ ಜಿಲ್ಲೆಯ ಕೆರೆಗಳ ಭರ್ತಿಗೆ ನೀರು ಹರಿಸಲಾಗುತ್ತದೆ ಎಂದು ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಹಿಂದಕ್ಕೆ ಪಡೆದರು.
ಧರಣಿಯಲ್ಲಿ ವಿಠ್ಠಲ ಬಿರಾದಾರ, ಸಂತೋಷ ಬಿರಾದಾರ, ಗುರುಲಿಂಗಪ್ಪ ಪಡಸಲಗಿ, ಮಲ್ಲಿಗೆಪ್ಪ ಸಾಸನೂರ ಪಾಲ್ಗೊಂಡಿದ್ದರು.
ಪ್ರತಿಭಟನಾ ಸ್ಥಳಕ್ಕೆ ಅಧೀಕ್ಷಕ ಅಭಿಯಂತರ ವಿ.ಆರ್. ಹಿರೇಗೌಡರ, ಕಾರ್ಯನಿರ್ವಾಹಕ ಅಭಿಯಂತರ ತಾರಾಸಿಂಗ್ ದೊಡಮನಿ, ಸಹಾಯಕ ಅಭಿಯಂತರ ರವಿ ಚಂದ್ರಗಿರಿಯವರ, ಕಿರಿಯ ಅಭಿಯಂತರ ವಿಠ್ಠಲ ಜಾಧವ, ಕಿರಿಯ ಅಭಿಯಂತರ ಕುಮಾರೇಶ ಹಂಚಿನಾಳ, ನಿಡಗುಂದಿ ಸಿಪಿಐ ಅಶೋಕ ಚವ್ಹಾಣ, ಕೆಎಸ್ಐಎಸ್ಎಫ್ ಇನ್ಸಪೆಕ್ಟರ್ ಶಿವಲಿಂಗ ಕುರೆನ್ನವರ, ಆಲಮಟ್ಟಿ ಪಿಎಸ್ ಐ ಎಫ್.ಎಸ್. ಇಂಡಿಕರ, ನಿಡಗುಂದಿ ಪಿಎಸ್ ಐ ಶಿವಾನಂದ ಪಾಟೀಲ, ಅಹ್ಮದ್ ಸಂಗಾಪುರ ಮತ್ತೀತರರು ಇದ್ದರು.
ಕೆರೆಗಳ ಭರ್ತಿಗೆ ಕ್ರಮ
ಏ.7 ರಿಂದ ಏ.22 ರವರೆಗೆ 15 ದಿನಗಳ ಕಾಲ ಜಿಲ್ಲೆಯ 127 ಕೆರೆಗಳು ಹಾಗೂ 13 ಬಾಂದಾರಗಳ ಭರ್ತಿಗೆ ನೀರು ಹರಿಸಲಾಗುವುದು, ಅದಕ್ಕಾಗಿ ಬೆಳಗಾವಿ ಪ್ರಾದೇಶಿಕ ಆಯುಕ್ತರು ಅನುಮತಿ ನೀಡಿದ್ದಾರೆ. ಹೀಗಾಗಿ ಸಂಜೆ 6 ಗಂಟೆಯಿಂದ ನೀರು ಹರಿಸಲು ಆರಂಭಿಸಲಾಗಿದೆ ಎಂದು ಕೆಬಿಜೆಎನ್ಎಲ್ ಅಧಿಕಾರಿಗಳು ತಿಳಿಸಿದರು. ಅದಕ್ಕಾಗಿ 2.5 ಟಿಎಂಸಿ ನೀರು ಕಾಲುವೆಗೆ ಹರಿಸಲಾಗುತ್ತದೆ ಎಂದರು.