ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪುರಸಭೆಯ ಸರ್ವ ಸದಸ್ಯರ ಸಲಹೆ ಪಡೆದುಕೊಂಡು ಅವರ ಸಹಕಾರದೊಂದಿಗೆ ಪಟ್ಟಣದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಪುರಸಭೆ ನೂತನ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಹೇಳಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸೋಮವಾರ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಇರುವ ಆರು ತಿಂಗಳ ಅಲ್ಪಾವಧಿಯಲ್ಲಿ ನನ್ನ ಕಾಲಮಿತಿಯಲ್ಲಿ ಪಟ್ಟಣದ ಸರ್ವಾಂಗೀಣ ಅಭಿವೃದ್ದಿಗೆ ಬದ್ದ. ಸಚಿವ ಶಿವಾನಂದ ಪಾಟೀಲರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಪುರಸಭೆ ಸದಸ್ಯರು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬರದಂತೆ ಕಾರ್ಯ ನಿರ್ವಹಿಸುವುದಾಗಿ ಹೇಳಿದರು.
ಉಪಾಧ್ಯಕ್ಷ ಅಶೋಕ ಹಾರಿವಾಳ ಮಾತನಾಡಿ, ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಆರು ತಿಂಗಳು ಮಾತ್ರ ಉಳಿದಿರುವುದರಿಂದ ಈ ಅವಧಿಯಲ್ಲಿ ಆಗಬೇಕಾದ ಕಾರ್ಯಗಳ ಬಗ್ಗೆ ವಾರ್ಡ್ ಗಳ ಸದಸ್ಯರೊಂದಿಗೆ ಚರ್ಚಿಸಿ ಅನುದಾನದ ಲಭ್ಯತೆಗೆ ಅನುಗುಣವಾಗಿ ಅಧ್ಯಕ್ಷರ ಅನುಮೋದನೆಯೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಅಭಿವೃದ್ಧಿ ಕಾರ್ಯಕ್ಕೆ ಸರ್ವ ಸದಸ್ಯರ, ಪುರಸಭೆ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರ ಬಹು ಮುಖ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಶಿವಾನಂದ ಈರಕಾರಮುತ್ಯಾ, ಪುರಸಭೆ ಸದಸ್ಯರಾದ ಪ್ರವೀಣ ಪೂಜಾರಿ, ನಜೀರ ಗಣಿ, ರವಿ ನಾಯ್ಕೋಡಿ, ಅಬ್ಬು ಚೌಧರಿ, ಪ್ರವೀಣ ಪವಾರ, ಸುಭಾಂಗೀನಿ ಗಾಯಕವಾಡ, ಲಕ್ಷ್ಮೀಬಾಯಿ ಬೆಲ್ಲದ, ಮುಖಂಡರಾದ ಬಸವರಾಜ ಹಾರಿವಾಳ, ಸುರೇಶಗೌಡ ಪಾಟೀಲ, ಶಂಕರಗೌಡ ಬಿರಾದಾರ, ಮಹಾಂತೇಶ ಆದಿಗೊಂಡ, ಸಂಗಯ್ಯ ಕಾಳಹಸ್ತೇಶ್ವರಮಠ, ಪಂಚಾಕ್ಷರಿ ಕಾಳಹಸ್ತೇಶ್ವರಮಠ, ರವಿ ರಾಠೋಡ, ಮತಾಬ ಬಮ್ಮನಳ್ಳಿ, ನಿಸಾರ ಚೌಧರಿ ಇತರರು ಇದ್ದರು.
ಇದೇ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪುರಸಭೆ ಸಿಬ್ಬಂದಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಿದರು.

