ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಭಾನುವಾರ ನಗರದಲ್ಲಿರುವ ಐತಿಹಾಸಿಕ ತಾಜ್ ಬಾವಡಿ, ಅಂಚೆ ಕಚೇರಿಯ ಆವರಣದಲ್ಲಿನ ಬಾವಿ, ಇಬ್ರಾಹಿಂಪುರದ ಬಾವಿ, ಕೆಕೆಆರ್‌ಟಿಸಿ ಆವರಣದಲ್ಲಿರುವ ಹಾಗೂ ಚಂದಾ ಬಾವಡಿ ಹಾಗೂ ಉಪ್ಪಲಿಬುರಜ್ ಮಾರ್ಕೆಟ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದಲ್ಲಿರುವ ಐತಿಹಾಸಿಕ ಬಾವಿಗಳನ್ನು ಸ್ವಚ್ಛಗೊಳಿಸಿ ಆ ನೀರನ್ನು ನಗರದ ಸಾರ್ವಜನಿಕರಿಗೆ ದೈನಂದಿನ ಬಳಕೆಗೆ ಉಪಯೋಗಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆಯಲ್ಲಿ ಸೂಚನೆ ನೀಡಿದ್ದಾರೆ. ನಗರದಲ್ಲಿರುವ ಐತಿಹಾಸಿಕ ಬಾವಡಿಗಳನ್ನು ಪುನರುಜ್ಜೀವನಗೊಳಿಸಿ, ಸ್ವಚ್ಛತೆ ಕೈಗೊಂಡು ಪಂಪ್ ಮೋಟರ್ ಅಳವಡಿಸಿ, ಪೈಪಲೈನ್ ಮೂಲಕ ಕಿರು ನೀರು ಸರಬರಾಜು ಮಾಡುವ ಕಾಮಗಾರಿ ಕೈಗೊಂಡು ನಗರದ ಸಾರ್ವಜನಿಕರಿಗೆ ದಿನಬಳಕೆಗೆ ನೀರು ಉಪಯೋಗಿಸಿಕೊಳ್ಳಲು ಅನುಕೂಲ ಮಾಡಿ ಕೊಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ನಗರದಲ್ಲಿರುವ ಎಲ್ಲಾ ಬಾವಿಗಳನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ದಿನಬಳಕೆಯ ಉಪಯೋಗಕ್ಕೆ ಪಾಲಿಕೆ ವತಿಯಿಂದ ಕ್ರಮಕ್ಕಾಗಿ ಹಾಗೂ ಬಾವಿಯಲ್ಲಿರುವ ಹೂಳನ್ನು ತೆರವುಗೊಳಿಸಿ, ಸ್ವಚ್ಛಗೊಳಿಸಬೇಕು. ನೀರನ್ನು ಕುಡಿಯಲು ಹೊರತುಪಡಿಸಿ, ದಿನಬಳಕೆಗೆ ಉಪಯೋಗಿಸಲು ಕ್ರಮ ವಹಿಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.
ಬಿಸಿಲಿನ ತಾಪಮಾನ ಹೆಚ್ಚಿಗಿರುವುದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದAತೆ ಸಮರ್ಪಕವಾಗಿ ನೀರನ್ನು ಸರಬರಾಜು ಮಾಡುವಂತೆಯೂ, ಕುಡಿಯುವ ನೀರು ಪೋಲಾಗದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಂತೆ ಅವರು ಸೂಚನೆ ನೀಡಿದರು.
ಚಂದಾ ಬಾವಡಿಯ ಸ್ವಚ್ಛತೆ ಕೈಗೊಂಡು ನೀರು ಶುದ್ದೀಕರಣಗೊಳಿಸುವ ಮೂಲಕ ಬೈಯೋ ರೆಮಿಡಿಷಿಯನ್ ಮಾದರಿಯಲ್ಲಿ ಮೊದಲನೇ ಹಂತದಲ್ಲಿ ಪ್ರಾಯೋಗಿಕವಾಗಿ ನೀರು ಪೂರೈಸಲು ಕ್ರಮ ವಹಿಸಲಾಗುತ್ತಿದೆ. ಅದರಂತೆ, ನಗರದಲ್ಲಿರುವ ೪೭ ಬಾವಿಗಳ ಪೈಕಿ ೨೫ ಬಾವಿಗಳನ್ನು ಸ್ವಚ್ಛಗೊಳಿಸಿ, ನೀರು ಶುದ್ಧೀಕರಣಗೊಳಿಸಿ ಪೂರೈಕೆಗೆ ಕ್ರಮ ವಹಿಸಲಾಗುತ್ತಿದೆೆ ಎಂದು ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರರಾದ ವಿಠ್ಠಲ ಹೊನ್ನಳ್ಳಿ, ಅಧಿಕ್ಷಕ ಅಭಿಯಂತರರಾದ ತಿಮ್ಮಪ್ಪ ಸೇರಿದಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

