ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಇಂದು ಬಿಜೆಪಿ ಪಕ್ಷ ಸ್ಥಾಪನೆಗೊಂಡ ದಿನ. ಪಕ್ಷಕ್ಕಾಗಿ ಅಟಲ್‌ಬಿಹಾರಿ ವಾಜಪೇಯಿ, ಎಲ್.ಕೆ ಅಡ್ವಾಣಿ, ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ, ಯಡಿಯೂರಪ್ಪ ಅವರಂತಹ ಹಿರಿಯರ ಮಾರ್ಗದರ್ಶನದ ಜೊತೆಗೆ ಸಾವಿರಾರು ಕಾರ್ಯಕರ್ತರು ಧ್ಯೇಯಕ್ಕಾಗಿ ತಮ್ಮ ಬದುಕನ್ನು ಸಮರ್ಪಿಸಿ ಪಕ್ಷ ಕಟ್ಟಿ ಬೆಳಸಿದ್ದಾರೆ ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಹೇಳಿದರು.
ಸಿಂದಗಿ ಪಟ್ಟಣದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಬಿಜೆಪಿ ಪಕ್ಷದ ೪೬ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಭಾರತ ಮಾತೆ ಹಾಗೂ ಪಕ್ಷದ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ, ಪಂಡಿತ ದೀನದಯಾಲ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ವಿಶ್ವದಲ್ಲೇ ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷವಾಗಿ ಬಿಜೆಪಿ ಬೆಳೆದಿದೆ. ದೇಶದ ಯಾವುದೋ ಭಾಗದ ಸಾಮಾನ್ಯ ಕಾರ್ಯಕರ್ತನೊಬ್ಬ ದೇಶವನ್ನು ಮುನ್ನಡೆಸುವ ನಾಯಕನಾಗಿ ಬೆಳೆಯಲು ಅವಕಾಶವಿರುವ ಏಕೈಕ ಪಕ್ಷವೆಂದರೆ ಅದು ಭಾರತೀಯ ಜನತಾ ಪಕ್ಷ. ಇಡೀ ವಿಶ್ವ ಪ್ರಸಂಶಿಸುವಂತಹ ಶ್ರೇಷ್ಠ ನಾಯಕರು ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ರಾಷ್ಟ್ರ ನಿರ್ಮಾಣಕ್ಕೆ ದುಡಿಯುವ ಮನೋಭಾವ ಹೊಂದಿದ್ದಾರೆ. ಸಾಮಾನ್ಯ ಕಾರ್ಯಕರ್ತರಿಂದಲೇ ಬೃಹತ್ತಾಗಿ ಬೆಳೆದ ಪಕ್ಷ ಇಂದು ದೇಶದ ಜನರಿಗೆ ನೆರಳಾಗಿದೆ. ದೇಶಕ್ಕೆ ಶಕ್ತಿ ತುಂಬಿ ಪಕ್ಷಕ್ಕಾಗಿ ಹಗಲಿರುಳು ಎನ್ನದೇ ದುಡಿದವರನ್ನು ಸ್ಮರಿಸೋಣ ಎಂದರು.
ಇದೇ ಸಂದರ್ಭದಲ್ಲಿ ಎಸ್‌ಟಿ ಮೋರ್ಚಾ ತಾಲೂಕಾಧ್ಯಕ್ಷ ಪ್ರಶಾಂತ ಕದ್ದರಕಿ, ಸಾಯಬಣ್ಣ ದೇವರಮನಿ, ಖಾಜು ಬಂಕಲಗಿ, ಗುರು ತಳವಾರ, ಸಮೀರ ಬಿಜಾಪುರ, ಚಂದ್ರಶೇಖರ ಅಮಲಿಯಾಳ, ಶರಣು ಮನಗೂಳಿ ಬ್ರಹ್ಮದೇವನಮಡು ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.
“ಪಕ್ಷವನ್ನು ಇನ್ನಷ್ಟು ಬಲಪಡಿಸಿ ಸಮಗ್ರ ಭಾರತ ಮತ್ತು ರಾಜ್ಯದ ಅಭಿವೃದ್ಧಿಗೆ ಕೈ ಜೋಡಿಸೋಣ. ಮುಂಬರುವ ತಾಪಂ ಮತ್ತು ಜಿಪಂ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಮತ್ತೆ ತಾಲೂಕನ್ನು ಕೇಸರಿಮಯವಾಗಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸೋಣ.”
– ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ
ಬಿಜೆಪಿ ಮುಖಂಡ

