ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಸಮೀಪದ ಯಲಗೂರದ ಯಲಗೂರೇಶ್ವರ ದೇವಸ್ಥಾನದಲ್ಲಿ ಭಾನುವಾರ ಸಂಭ್ರಮದಿಂದ ರಾಮನವಮಿ ಆಚರಿಸಲಾಯಿತು.
ಬೆಳಿಗ್ಗೆ ಶ್ರೀ ರಾಮನ ಉತ್ಸವ ಮೂರ್ತಿಯ ಮೆರವಣಿಗೆ ಪೂರ್ಣ ಕುಂಭ ಹೊತ್ತ ಮಹಿಳೆಯರ ಮಧ್ಯೆ ಜರುಗಿತು. ಕೃಷ್ಣಾ ನದಿಗೆ ತೆರಳಿ ಸ್ನಾನ ಮಾಡಿಸಿ ನಂತರ ನದಿಯಿಂದ ದೇವಸ್ಥಾನದವರೆಗೆ ಮೆರವಣಿಗೆ ಜರುಗಿತು.
ದೇವಸ್ಥಾನದ ಆವರಣದಲ್ಲಿ ಮಧ್ಯಾಹ್ನ ೧೨ ಕ್ಕೆ ತೊಟ್ಟಿಲಲ್ಲಿ ರಾಮನ ಮೂರ್ತಿ ಇಟ್ಟು ರಾಮನ ತೊಟ್ಟಿಲು ತೂಗಲಾಯಿತು. ಅಲ್ಲಿ ಹೆಸರಿಡುವ ಪ್ರಕ್ರಿಯೆ ಜರುಗಿತು. ಭಕ್ತ ಸಮುದಾಯ ರಾಮನ ಘೋಷಣೆ ಕೂಗಿದರು. ಸೇರಿದ್ದ ಮಹಿಳೆಯರು ರಾಮನ ವಿವಿಧ ಅರತಿ ಹಾಡಿದರು. ಯಲಗೂರೇಶನಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಪೂಜೆಯೂ ಜರುಗಿತು.
ನೆರೆದ ಭಕ್ತಾದಿಗಳಿಗೆ ಪಾನಕಾ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು. ಡಾ ವಾದಿರಾಜ ಯಲಬುರ್ಗಿ ದಂಪತಿ ಪೂಜೆ ನೆರವೇರಿಸಿದರು.
ಫಂಡರಪುರದಿಂದ ಬಂದ ಭಕ್ತಾದಿಗಳು ಸೇರಿ ದ್ರಾಕ್ಷಿಯ ಅಲಂಕಾರ ನೆರವೇರಿಸಿದರು. ಯಲಗೂರೇಶನಿಗೆ ಹಾಗೂ ದೇವಸ್ಥಾನದ ಆವರಣವೆಲ್ಲವೂ ದ್ರಾಕ್ಷಿಯ ಅಲಂಕಾರ ಮಾಡಿದ್ದು ವಿಶೇಷ. ೧೦೦ ಕೆಜಿಗೂ ಅಧಿಕ ದ್ರಾಕ್ಷಿ ಬಳಸಲಾಗಿತ್ತು.
ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಅನಂತ ಓಂಕಾರ, ಪಾಂಡುರಂಗ ಆಚಾರ್ಯ ಹೊಸೂರ, ಸಂತೋಷ ಪೂಜಾರ, ಬದರಿನಾರಾಯಣ ಚಿಮ್ಮಲಗಿ, ಗೋಪಾಲಾಚಾರ್ಯ ಹಿಪ್ಪರಗಿ, ಪ್ರಹ್ಲಾದ ಜೋಶಿ, ವಿಠ್ಠಲಾಚಾರ್ಯ ಗದ್ದನಕೇರಿ ಮತ್ತೀತರರು ಇದ್ದರು.
ರಾಮನವಮಿಯಿಂದ ಹನುಮ ಜಯಂತಿಯವರೆಗೆ ಬೆಳಿಗ್ಗೆ ೯ ರಿಂದ ೧೨ರವರೆಗೆ ರಘೋತ್ತಮಾಚಾರ್ಯ ನಾಗಸಂಪಗಿ ಅವರು “ಭಾಗವತ ಪುರಾಣ’ ಹಾಗೂ ದ್ವೈಪಾಯನಾಚಾರ್ಯ ಜೋಶಿ ಅವರು ಸಂಜೆ ೬ ರಿಂದ ೮ ರವರೆಗೆ “ಶ್ರೀಮದ್ ರಾಮಾಯಣ ಕಥಾ ಪ್ರಸಂಗ’ ಪುರಾಣ ಪ್ರವಚನ ಮಾಡಲಿದ್ದಾರೆ.

