ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಎಲೆಮರೆಯ ಕಾಯಿಯಂತೆ ಸಮಾಜದ ಏಳಿಗೆಗಾಗಿ ಸೇವೆ ಸಲ್ಲಿಸಿ ವಿಶೇಷ ಸಾಧನೆ ಮಾಡಿದ 35 ಜನ ಸಾಧಕರನ್ನು ಗುರುತಿಸಿ ಅವರ ಜೀವಮಾನ ಸಾಧನೆ, ಪಡೆದ ಪ್ರಶಸ್ತಿ-ಪುರಸ್ಕಾರಗಳ ಕುರಿತು ‘ಅಪರೂಪದವರು’ ಕೃತಿಯಲ್ಲಿ ದಾಖಲಿಸಿರುವುದು ಜನ ಮೆಚ್ಚುಗೆಯ ಕಾರ್ಯವಾಗಿದೆ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳು, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಮನ ಟ್ರಸ್ಟ್ ಬೆಂಗಳೂರು, ಸಾಹಿತ್ಯ ಸೌರಭ ವೇದಿಕೆ ಜಮಖಂಡಿ ಹಾಗೂ ಶ್ರೀವೀರೇಶ್ವರ ಪ್ರಕಾಶನ ಜಮಖಂಡಿ ಇವುಗಳ ಆಶ್ರಯದಲ್ಲಿ ಇಲ್ಲಿನ ಡಾ.ಗುರುದೇವ ರಾನಡೆ ಸಾಂಸ್ಕೃತಿಕ ಭವನದಲ್ಲಿ ನಡೆದ ಡಾ.ಸಂಗಮೇಶ ಮಟೋಳಿ ವಿರಚಿತ ತಾಲ್ಲೂಕಿನ ‘ಅಪರೂಪದವರು’ ಕೃತಿ ಲೋಕಾರ್ಪಣೆ ಮತ್ತು ರಾಜ್ಯಮಟ್ಟದ ‘ಸಾಧಕರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಮೂಲ್ಯವಾದ ಸಮಯವನ್ನು ಕೊಟ್ಟು ಇನ್ನೊಬ್ಬರ ಸಾಧನೆಯನ್ನು ಮೆಚ್ಚಿ ಕೃತಿ ರಚಿಸಿರುವುದು ಲೇಖಕರ ಹೃದಯ ಶ್ರೀಮಂತಿಕೆಯ ಪ್ರತೀಕವಾಗಿದೆ ಎಂದರು.
ರಾಜ್ಯ ಸರ್ಕಾರದ ಮಾಹಿತಿ ಆಯೋಗದ ಮಾಹಿತಿ ಆಯುಕ್ತ ರಾಜಶೇಖರ ಎಸ್. ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿ, ಇಂದಿನ ಸಾಧಕರ ಜೀವಮಾನ ಸಾಧನೆಗಳು ಕುರಿತು ಮುಂದಿನ ಪೀಳಿಗೆಗೆ ಪರಿಚಯಿಸುವುದು ಮಹಾನ್ ಕಾರ್ಯವಾಗಿದೆ. ಸಾಧಕರ ಸಾಧನೆಗಳು ಮುಂದಿನ ಪೀಳಿಗೆಗೆ ಪ್ರೇರಣೆ ಸ್ಫೂರ್ತಿ ನೀಡಲಿ ಎಂದು ಹಾರೈಸಿದರು.
ಬೆಂಗಳೂರಿನ ಬಸವನಗುಡಿಯ ಜಿಲ್ಲಾ ನೋಂದಣಾಧಿಕಾರಿ ಸವಿತಾಲಕ್ಷ್ಮೀ ಬೆಳಗಲಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣ, ಸಾಹಿತ್ಯ, ಕ್ರೀಡೆ ಹಾಗೂ ಕಲಾವಿದರ ಕುರಿತು ವ್ಯಕ್ತಿಚಿತ್ರಣಕ್ಕೆ ಸೇರಬಹುದಾದ ಲೇಖನಗಳನ್ನು ಕೃತಿಯಲ್ಲಿ ದಾಖಲಿಸುವ ಮೂಲಕ ಕಾಲಾಂತರದಲ್ಲಿ ಸಾಧಕರು ಮರೆತು ಹೋಗಬಾರದೆಂಬ ಲೇಖಕರ ಕಳಕಳಿ ಮೆಚ್ಚುವಂತಹದ್ದು ಎಂದರು.
ಬಾಗಲಕೋಟೆಯ ವಿಶ್ರಾಂತ ಪ್ರಾಚಾರ್ಯ ಪ್ರೊ.ಎನ್.ಆರ್. ಹಳ್ಳೂರ ಕೃತಿ ಪರಿಚಯಿಸುತ್ತ ಮಾತನಾಡಿ, ಜಮಖಂಡಿ ತಾಲ್ಲೂಕಿನ ‘ಅಪರೂಪದವರು’ ಕೃತಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡಿರುವ ಲೇಖಕ ಡಾ.ಸಂಗಮೇಶ ಮಟೋಳಿ ತಮ್ಮದೆಯಾದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ ಎಂದರು.
ಗುರುಬಸುಗೌಡ ಪಾಟೀಲ, ಪರಮೇಶ್ವರ ತೇಲಿ, ಪುಂಡಲೀಕ ಭಜಂತ್ರಿ, ಸಿದ್ದು ಉಪ್ಪಲದಿನ್ನಿ ಸಂಗೀತ ಸೇವೆ ಸಲ್ಲಿಸಿದರು. ಕೃತಿಯ ಲೇಖಕ ಡಾ.ಸಂಗಮೇಶ ಮಟೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಧಕರತ್ನ ಪ್ರಶಸ್ತಿ ಸ್ವೀಕರಿಸಿದ 35 ಜನ ಸಾಧಕರ ಪರವಾಗಿ ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಅನಿಸಿಕೆ ಹಂಚಿಕೊಂಡರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿದರು. ಪಿ.ಬಿ. ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಭೂಷಣ ಪತ್ತಾರ, ಕಸಾಪ ಗೌರವ ಕಾರ್ಯದರ್ಶಿ ವಿನೋದ ಲೋಣಿ ಇದ್ದರು.
ವರ್ಷಾರಾಣಿ ನಾವಿ ಪ್ರಾರ್ಥನೆ ಗೀತೆ ಹಾಡಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ತಳಕೇರಿ ಸ್ವಾಗತಿಸಿದರು. ಶಿಕ್ಷಕಿ ಸರಿತಾ ಶಿರಗುಪ್ಪಿ, ಶಿಕ್ಷಕ ನಾಗೇಶ ಮಾಲಗಾರ ನಿರೂಪಿಸಿದರು. ಪ್ರೊ.ಆರ್.ಕೆ. ಹೊಸಟ್ಟಿ ವಂದಿಸಿದರು.
ಇದಕ್ಕೂ ಮೊದಲು ನಗರದ ಎಜಿ.ದೇಸಾಯಿ ವೃತ್ತದಿಂದ ಬಾಲಕರ ಸರ್ಕಾರಿ ಪಿ.ಬಿ. ಪ್ರೌಢ ಶಾಲೆಯ ಆವರಣದವರೆಗೆ ವಾಧ್ಯಮೇಳ ಕಲಾತಂಡದೊಂದಿಗೆ ಸಾಧಕರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಭುವನೇಶ್ವರಿ ವೇಷಧಾರಿಣಿ ಬಾಲಕಿ ರಿತಿಕಾ ಪಾಟೀಲ ಕೃತಿಯನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು.

