ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಭಾರತೀಯ ಕಲೆ, ಸಂಸ್ಕ್ರತಿ, ಸಾಹಿತ್ಯ ವೈಭವಯುತವಾಗಿದೆ. ಕಲೆ,ಸಂಸ್ಕ್ರತಿ, ಸಾಹಿತ್ಯವನ್ನು ಗೌರವಿಸುವದು ಭಾರತೀಯರ ಗುಣವೈಶಿಷ್ಠವಾಗಿದೆ ಎಂದು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಕಾಳಿಕಾದೇವಿ ದೇವಸ್ಥಾನದ ಸಭಾ ಭವನದಲ್ಲಿ ಮಯೂರಿ ನಾಟ್ಯ ಕಲಾ ಅಕಾಡೆಮಿಯು ಭಾನುವಾರ ಹಮ್ಮಿಕೊಂಡಿದ್ದ ಭರತ ನಾಟ್ಯ ಶಾಲೆ ಉದ್ಘಾಟನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ನಟರಾಜನಿಗೆ ಪುಷ್ಟಾರ್ಚನೆ, ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಭರತ ನಾಟ್ಯವು ಪ್ರಾಚೀನ ಕಾಲದಿಂದಲೂ ಇರುವದನ್ನು ಕಾಣುತ್ತೇವೆ. ಪ್ರಾಚೀನ ದೇವಸ್ಥಾನಗಳಲ್ಲಿಯೂ ಈ ಕಲೆಯ ಶಿಲ್ಪಕಲೆಯನ್ನು ಕಾಣುತ್ತೇವೆ. ರಾಜ-ಮಹಾರಾಜರು ಈ ಕಲೆಯನ್ನು ಪೋಷಿಸುತ್ತಿದ್ದರು. ಭರತ ನಾಟ್ಯ ಕಲೆಯು ಒಳ್ಳೆಯ ಸಂಸ್ಕಾರ ಕೊಡುವದು. ಇದಕ್ಕೆ ಗೌರವ ಸ್ಥಾನಮಾನವಿದೆ. ಇಂತಹ ಶಾಲೆಯನ್ನು ಸ್ಥಳೀಯವಾಗಿ ಆರಂಭವಾಗುತ್ತಿರುವದು ಈ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗುವದರಲ್ಲಿ ಸಂದೇಹವಿಲ್ಲ. ಈ ಶಾಲೆಯಿಂದ ಹೊಸ ಪ್ರತಿಭೆಗಳು ಹೊರಬಂದು ಬಸವ ನೆಲದ ಹೆಸರನ್ನು ನಾಡಿನಲ್ಲಿ ತರುವಂತಾಗಲೆಂದು ಆಶಿಸಿದರು.
ಶಿಕ್ಷಕಿ ನೀಲಗಂಗಾ ಯರನಾಳ ಮಾತನಾಡಿ, ಪಾಲಕರು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು. ಪ್ರತಿಯೊಬ್ಬ ಮಗು ಉತ್ತಮ ಶಿಕ್ಷಣ, ಸಂಸ್ಕಾರ ಪಡೆಯುವಂತಾಗಬೇಕು. ಭರತ ನಾಟ್ಯವು ಜೀವನ ಕೌಶಲ್ಯ ಕಲಿಸಿಕೊಡುತ್ತದೆ. ಇಂತಹ ಕಲೆಯನ್ನು ತಮ್ಮ ಮಕ್ಕಳಿಗೆ ಕಲಿಸುವಂತಾಗಬೇಕು. ಮಕ್ಕಳು ಲವಲವಿಕೆಯಿಂದ ಇರುವ ಮೂಲಕ ಮನಸ್ಸಿಟ್ಟು ಕಲಿಯುವಂತಾಗಬೇಕು. ಈ ಭಾಗದಲ್ಲಿ ಇಂತಹ ಶಾಲೆಯ ಅಗತ್ಯತೆಯಿತ್ತು. ಇಂದು ಆರಂಭವಾಗಿದ್ದು. ಇದರ ಸದುಪಯೋಗ ಪಡೆದುಕೊಳ್ಳುವಂತಾಗಬೇಕೆಂದರು.
ಶಿಕ್ಷಕಿ ಅರುಂಧತಿ ಹತ್ತಿಕಾಳ ಮಾತನಾಡಿ,ಭಾರತೀಯ ಕಲೆ-ಸಂಸ್ಕ್ರತಿ ವೈಶಿಷ್ಟ್ಯಪೂರ್ಣವಾಗಿದೆ. ಅದಕ್ಕಾಗಿ ಜಗತ್ತಿನಲ್ಲಿರುವ ಎಲ್ಲರೂ ಇದಕ್ಕೆ ತಲೆ ಬಾಗುತ್ತಾರೆ. ಭರತ ನಾಟ್ಯವು ಭಾವ-ರಾಗ-ತಾಳವನ್ನು ಹೊಂದಿದೆ. ನಮ್ಮ ಸಂಸ್ಕ್ರತಿ, ಕಲೆಯನ್ನು ಸಂರಕ್ಷಿಸಿಸುವದು ನಮ್ಮೆಲ್ಲರ ಜವಾಬ್ದಾರಿ. ನಮ್ಮ ಕಲೆಯನ್ನು ಉಳಿಸುವಲ್ಲಿ ಇಂತಹ ಶಾಲೆಗಳು ಆರಂಭವಾಗುವದು ಪೂರಕವಾಗುತ್ತದೆ ಎಂದರು.
ನಿವೃತ್ತ ಉಪಪ್ರಾಂಶುಪಾಲ ಎಸ್.ಎಸ್.ಝಳಕಿ ಮಾತನಾಡಿ, ಈ ಶಾಲೆಯನ್ನು ಸಮಾನ ಮನಸ್ಕ ಮಹಿಳೆಯರು ಕೂಡಿಕೊಂಡು ಆರಂಭಿಸಿರುವದು ಶ್ಲಾಘನೀಯ. ಈ ಶಾಲೆಯು ಉತ್ತೋತ್ತರವಾಗಿ ಬೆಳೆಯುವಂತಾಗಲೆಂದರು.
ವೇದಿಕೆಯಲ್ಲಿ ಪೂರ್ಣಿಮಾ ಚೌಧರಿ, ನಾಟ್ಯ ಕಲಾ ಅಕಾಡೆಮಿ ಸಂಸ್ಥಾಪಕ ಸದಸ್ಯೆ ವಿದುಷಿ ಲಕ್ಷ್ಮೀ ತೇರದಾಳಮಠ ಇದ್ದರು. ಡಾ.ವೀಣಾ ಗುಳೇದಗುಡ್ಡ ಪ್ರಾಸ್ತವಿಕವಾಗಿ ಮಾತನಾಡಿದರು. ರಾಜೇಶ್ವರಿ ಯರನಾಳ ಸ್ವಾಗತಿಸಿದರು. ಶಿವು ಮಡಿಕೇಶ್ವರ ನಿರೂಪಿಸಿದರು. ರೇವತಿ ವಂದಾಲಮಠ ವಂದಿಸಿದರು. ಇದೇ ಸಂದರ್ಭದಲ್ಲಿ ಸಾಕ್ಷಿ ಸಂಗಡಿಗರು, ಶಿವಾನಿ ಪಾಟೀಲ, ಪ್ರತಿಭಾ ಹಡಪದ ತಮ್ಮ ಭರತ ನಾಟ್ಯ ಪ್ರದರ್ಶಿಸಿದರು.

