ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಸ್ವಾತಂತ್ರ್ಯ ಜ್ಯೋತಿಯನ್ನು ಮನೆ ಮನೆಗಳಲ್ಲಿ ಹಚ್ಚಿ ರಾಷ್ಟ್ರ ಭಕ್ತಿಯನ್ನು ಬೆಳೆಸುವಲ್ಲಿ ವೀರ ಸಾವರ್ಕರ ಅಂತಹ ನೂರಾರು ರಾಷ್ಟ್ರಭಕ್ತರ ತ್ಯಾಗ ಬಲಿದಾನ ಫಲವಾಗಿ ಸ್ವಾತಂತ್ರ್ಯ ಸಿಕ್ಕಿದೆ. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಫಲ ಅನುಭವಿಸುತ್ತಿರುವ ನಾವು ರಾಷ್ಟ್ರಭಕ್ತರ ಸಾಧನೆ ತಿಳಿದು ಆ ದಾರಿಯಲ್ಲಿ ಸಾಗೋಣ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.
ಪಟ್ಟಣದ ದ್ಯಾಮವ್ವದೇವಿ ದೇವಸ್ಥಾನದ ಆವರಣದಲ್ಲಿ ರವಿವಾರ ಭಾರತೀಯ ಜನತಾ ಪಕ್ಷದ ಸಂಸ್ಥಾಪಕ ದಿನ ಹಾಗೂ ಶ್ರೀರಾಮ ನವಮಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಷ್ಟ್ರೀಯ ಚಿಂತನೆಗಳ ಮೂಲಕ ಅಭಿವೃದ್ಧಿಯ ಪಥಕ್ಕೆ ನಾಂದಿ ಹಾಡಿದ ಪಕ್ಷದ ಹಿರಿಯರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬೇಕಿದೆ. ತಳಮಟ್ಟದಿಂದ ಪಕ್ಷವನ್ನು ಬಲಪಡಿಸುತ್ತಿರುವ ಕಾರ್ಯಕರ್ತರ ಶ್ರಮವನ್ನು ಗೌರವಿಸಬೇಕು ಎಂದರು.
ಪಕ್ಷದ ಸಂಸ್ಥಾಪಕರಾದ ಶ್ಯಾಮಪ್ರಸಾದ್ ಮುಖರ್ಜಿ ಹಾಗೂ ದೀನದಯಾಳ ಉಪಾಧ್ಯಾಯ ಮತ್ತು ಶ್ರೀ ರಾಮನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಮಹಾಂತಯ್ಯ ಸ್ವಾಮಿಗಳು, ಅಧ್ಯಕ್ಷತೆಯನ್ನು ಬಿಜೆಪಿ ಮಂಡಲ ಅಧ್ಯಕ್ಷ ಸಿದ್ರಾಮ ಕಾಖಂಡಕಿ, ಅತಿಥಿಗಳಾಗಿ ಅಖೀಲಗೌಡ ಪಾಟೀಲ, ವಿಜಯಕುಮಾರ್ ಪೂಜಾರಿ, ಬಂದೇನವಾಜ್ ವಾಲಿಕಾರ, ವಿಠ್ಠಲ ಆಸಂಗಿ, ಶಾಂತಾ ಬೀಳಗಿ, ರಾಜಶೇಖರ ಶೀಲವಂತ, ಪ್ರಶಾಂತ ಪವಾರ, ಅಪ್ಪಾಶೀ ಮಟ್ಯಾಳ, ಬಾಬು ಭಜಂತ್ರಿ, ಈರಯ್ಯ ಮಠಪತಿ ಹಾಗೂ ಭಾಜಪಾ ಕಾರ್ಯಕರ್ತರು ಉಪಸ್ಥಿತರಿದ್ದರು.

