ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ಏಪ್ರಿಲ್ 2, ಪೊಲೀಸ್ ಧ್ವಜ ದಿನಾಚರಣೆಯಂದು ರಾಜ್ಯ ಸಶಸ್ತ್ರ ಮೀಸಲು (KSRP) ಪಡೆಯ, ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀದೇವಿ ಕಟಕಧೋಂಡ ಇವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರಿಂದ ಮುಖ್ಯಮಂತ್ರಿ ಚಿನ್ನದ ಪದಕ ಪ್ರದಾನ ಮಾಡಲಾಯಿತು.
ಮೂಲತಃ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದವರಾದ ಶ್ರೀದೇವಿ ಕಟಕಧೋಂಡ, 2015 ರಲ್ಲಿ ಪೊಲೀಸ್ ಇಲಾಖೆಗೆ ಆಯ್ಕೆಯಾಗಿ, ಪ್ರಸ್ತುತ ಬೆಂಗಳೂರಿನ ಕೆ.ಎಸ್.ಆರ್.ಪಿ 4ನೇ ಪಡೆಯ ಪೊಲೀಸ್ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೆರೆ ಸಂತ್ರಸ್ತರ ರಕ್ಷಣಾ ಕಾರ್ಯ, ಚುನಾವಣೆಗಳ ಕರ್ತವ್ಯ, ಚಿತ್ರದುರ್ಗ ಒನಕೆ ಚಳುವಳಿ, ಮಂಗಳೂರು ಕೋಮು ಗಲಭೆ, ಕೋರೊನಾ ಬಂದೋಬಸ್ತಗಳಲ್ಲಿ ಮಹತ್ತರ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೆ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ನಡೆಯುವ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ವಿವಿಧ ಕವಾಯಿತನ ತುಕಡಿಯ ನಾಯಕಿಯಾಗಿ ಯಶಸ್ವಿಯಾಗಿದ್ದಾರೆ.
ಇವರ ಈ ಅತ್ಯುತ್ತಮ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ 2023ರ ಮುಖ್ಯ ಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಿದೆ.
ಚಿನ್ನದ ಪದಕ ಪಡೆದ ಶ್ರೀದೇವಿ ಕಟಕಧೋಂಡ ಇವರಿಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ, ಸಿಬ್ಬಂದಿಗಳು ಹಾಗೂ ವಿಜಯಪುರ ಜಿಲ್ಲೆಯ ಅಭಿಮಾನಿಗಳು ಶುಭ ಹಾರೈಸಿ ಅಭಿನಂದಿಸಿದ್ದಾರೆ.

