ಉದಯರಶ್ಮಿ ದಿನಪತ್ರಿಕೆ
ದೇವರ ಹಿಪ್ಪರಗಿ: ಮಡಿವಾಳ ಮಾಚಿದೇವರ ರಥೋತ್ಸವ ಹಾಗೂ ಪಲ್ಲಕ್ಕಿ ಮಹೋತ್ಸವ ಸಾವಿರಾರು ಭಕ್ತವೃಂದದೊಂದಿಗೆ ವಿಜೃಂಭಣೆಯಿಂದ ಜರುಗಿತು.
ಪಟ್ಟಣದಲ್ಲಿ ಮಾಚಿದೇವರ ರಥೋತ್ಸವದ ಅಂಗವಾಗಿ ಶನಿವಾರ ಗದ್ದುಗೆಮಠದಲ್ಲಿ ಸಾಂಪ್ರದಾಯಿಕವಾಗಿ ನಡೆದು ಬಂದ ಪೂಜಾ ವಿಧಿವಿಧಾನಗಳು ಮಡಿವಾಳೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಬೆಳಿಗ್ಗೆ ಹೋಮ ಹವನದೊಂದಿಗೆ ಆರಂಭಗೊಂಡವು. ನಂತರ ಆರಾ ಎಂದೇ ಕರೆಯಲಾಗುವ ಪ್ರಕೃತಿಗೆ ಆಹಾರ ನೀಡುವುದು ಜರುಗಿತು. ಆನಂತರ ಮಾಚಿದೇವರನ್ನು ಹೊತ್ತ ಪಲ್ಲಕ್ಕಿ ಗದ್ದುಗೆಮಠದಿಂದ ಹೊರಟು ಮೇನ್ ಬಜಾರಿನಲ್ಲಿರುವ ತೇರಿನವರೆಗೆ ಸಾಗಿ ೫ ಸುತ್ತು ಪ್ರದಕ್ಷಿಣೆ ಹಾಕಿ ನೈವೇದ್ಯ(ಬಡ್ಯಾಣ) ಅರ್ಪಿಸಲಾಯಿತು. ತದನಂತರ ಬೆಳಿಗ್ಗೆಯಿಂದಲೇ ಬೃಹತ್ ಹೂವಿನ ಹಾರ, ತಳಿರು ತೋರಣಗಳಿಂದ ಶೃಂಗಾರಗೊಂಡ ರಥ(ತೇರ) ನೆರೆದ ಸಾವಿರಾರು ಜನ ಭಕ್ತರು ಜಯಕಾರ ಉದ್ಘೋಶಗಳಿಂದ ಚಾಲನೆ ನೀಡಲಾಯಿತು.
ಯುವಭಕ್ತ ಸಮೂಹ ಉತ್ಸಾಹದಿಂದ ರಥವನ್ನು ಸರಾಗವಾಗಿ ಮಾನೆದೊಡ್ಡಿ ಹತ್ತಿರದವರೆಗೆ ಎಳೆದು ತಮ್ಮ ಭಕ್ತಿ, ಭಾವ ತೋರಿದರು. ಈ ಸಮಯದಲ್ಲಿ ಮಹಿಳೆಯರು, ಮಕ್ಕಳು, ಯುವಕರು ತಾವು ತಂದ ಉತ್ತತ್ತಿ, ಬಾಳೆಹಣ್ಣುಗಳನ್ನು ರಥೋತ್ಸವ ಸಾಗುವಾಗ ಅದರ ಮೇಲೆ ಎರೆಚಿ ಸಂತಸಪಟ್ಟರು. ನಂತರ ಮಾಚಿದೇವರನ್ನು ಹೊತ್ತ ಪಲ್ಲಕ್ಕಿ ಉತ್ಸವ ಹೊರವಲಯದ ಮಡಿವಾಳಮಾಚಿದೇವರ ದೇವಸ್ಥಾನದವರೆಗೆ ಮೆರವಣಿಗೆಯಲ್ಲಿ ತೆರಳಿ ಪುನಃ ಮರಳಿ ಗದ್ದಿಗೆಮಠಕ್ಕೆ ಬಂದು ಸೇರಿತು. ಜಾತ್ರೆಯ ಅಂಗವಾಗಿ ಮಡಿವಾಳ ಮಾಚಿದೇವ ದೇವಸ್ಥಾನದಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದು, ಭಕ್ತರು ಸವಿದು ಸಂತೃಪ್ತರಾದರು. ಬೆಳಿಗ್ಗೆಯಿಂದ ಆರಂಭವಾದ ಈ ಎಲ್ಲ ಧಾರ್ಮಿಕ ಕಾರ್ಯಗಳಲ್ಲಿ ಪಟ್ಟಣದ ಭಕ್ತ ಸಮೂಹ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಮಾಚಿದೇವರ ಕೃಪೆಗೆ ಪಾತ್ರವಾಯಿತು.

