ಕನಮಡಿ ಗ್ರಾಮದಲ್ಲಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಚಾಲನೆ | ಯಾತ್ರಿ ನಿವಾಸ ಕಟ್ಟಡ ಉದ್ಘಾಟನೆ | ವಿದ್ಯುತ್ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಈ ಭಾಗದಲ್ಲಿ ನೀರಾವರಿಯಿಂದಾಗಿ ಅತೀ ಹೆಚ್ಚು ವಿದ್ಯುತ್ ಬಳಕೆಯಾಗುತ್ತಿರುವುದನ್ನು ಮನಗಂಡು, ನೀರಾವರಿಯಷ್ಟೇ ವಿದ್ಯುತ್‌ಗೆ ಪ್ರಾಮುಖ್ಯತೆ ನೀಡಿ ಜಲಕ್ರಾಂತಿಯೊಂದಿಗೆ ಇಂಧನ ಕ್ರಾಂತಿಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.
ಶನಿವಾರ ಕನಮಡಿ ಗ್ರಾಮದಲ್ಲಿ ಹಮ್ಮಿಕೊಂಡ ೨೭ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮಳೆ ಮಲ್ಲೇಶ್ವರ ಕೆಳಗಿನಮಠ ಯಾತ್ರಿ ನಿವಾಸ ಕಟ್ಟಡ ಉದ್ಘಾಟನೆ ಹಾಗೂ ೧೧೦ ಕೆವಿ ವಿದ್ಯುತ್ ವಿತರಣಾ ಕೇಂದ್ರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ನೀರು ಎಷ್ಟು ಮುಖ್ಯವೋ ಅಷ್ಟೇ ವಿದ್ಯುತ್‌ಗೂ ಅಷ್ಟೇ ಪ್ರಾಮುಖ್ಯತೆ ನೀಡಲಾಗಿದೆ. ಸ್ವಾತಂತ್ರö್ಯ ನಂತರದಿಂದ ೨೦೧೪ರವರೆಗೆ ಜಿಲ್ಲೆಯಲ್ಲಿ ೨೨೦/೧೧೦ ಕೆ.ವಿಯ ಕೇವಲ ೨೭ ವಿದ್ಯುತ್ ವಿತರಣಾ ಕೇಂದ್ರಗಳು ಕಾರ್ಯನಿರ್ವಹಣೆಯಾಗಿ ೨೧೨೦ ಎಂವಿಎ ಸಾಮರ್ಥ್ಯದ ವಿದ್ಯುತ್ ಬಳಕೆಯಾಗುತ್ತಿತ್ತು, ಆದರೆ ೨೦೧೪ ರಿಂದ ೨೦೨೪ರವರೆಗೆ ಕೇವಲ ಹತ್ತು ವರ್ಷಗಳ ಅವಧಿಯಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿ, ಮುಂದಾಲೋಚನೆಯಿಂದ, ಈ ಭಾಗದ ಬಳಕೆ-ಬೇಡಿಕೆಯನುಸಾರವಾಗಿ ಅಭಿವೃದ್ದಿಗೆ ಆದ್ಯತೆ ನೀಡಿ, ಹೊಸದಾಗಿ ೨೨೦/೧೧೦ ಕೆವಿ ೩೪ ವಿದ್ಯುತ್ ವಿತರಣಾ ಕೇಂದ್ರಗಳನ್ನು ನಿರ್ಮಾಣ ಮಾಡಿ, ೧೦೪೦ ಎಂವಿಎ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು ೨೨೦/೧೧೦ ಕೆವಿಯ ೬೧ ವಿದ್ಯುತ್ ವಿತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ೩೧೬೦ ಎಂವಿಎ ವಿದ್ಯುತ್ ಸಾಮರ್ಥ್ಯದ ಬಳಕೆಯಾಗುತ್ತಿದೆ ಎಂದು ಹೇಳಿದರು.
ಬಬಲೇಶ್ವರ ಮತಕ್ಷೇತ್ರದಲ್ಲಿ ೨೦೦೫ರವರೆಗೆ ತಿಕೋಟಾ, ಮಮದಾಪುರ, ಶಿರಬೂರಗಳಲ್ಲಿ ಮಾತ್ರ ೧೧೦ ಕೆ.ವಿ. ಸ್ಟೇಶನ್‌ಗಳಿದ್ದವು. ನಂತರ ೨೦೧೧ ರಲ್ಲಿ ಬಬಲೇಶ್ವರ, ೨೦೧೩ರಲ್ಲಿ ತೊರವಿ, ೨೦೧೬ರಲ್ಲಿ ಟಕ್ಕಳಕಿ, ೨೦೧೭ರಲ್ಲಿ ದೇವರಗೆಣ್ಣೂರ, ೨೦೨೧ರಲ್ಲಿ ಕಂಬಾಗಿ, ೨೦೨೨ರಲ್ಲಿ ಹೊನವಾಡ, ಬೆಳ್ಳುಬ್ಬಿಯಲ್ಲಿ, ಪ್ರಸ್ತುತ ೨೦೨೫ರಲ್ಲಿ ಕನಮಡಿ, ಕಾಖಂಡಕಿ ಹಾಗೂ ನಿಡೋಣಿಯಲ್ಲಿ ಹೊಸದಾಗಿ ೧೧೦ ಕೆವಿ ಸ್ಟೇಶನ್‌ಗಳನ್ನು ನಿರ್ಮಾಣ ಮಾಡುವ ಮೂಲಕ ವಿದ್ಯುತ್ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ಮಾಡಲಾಗಿದೆ. ನೀರಾವರಿ ಅನುಕೂಲ ಒದಗಿಸುವ ದೃಷ್ಟಿಯಿಂದ ವಿದ್ಯುತ್ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ ಎಂದು ಹೇಳಿದ ಅವರು, ವಿದ್ಯುತ್ ಕ್ಷೇತ್ರದ ಅಭಿವೃದ್ದಿಯಲ್ಲಿ ಶ್ರಮಿಸಿದ ಕೆಪಿಟಿಸಿಎಲ್ ಅಧೀಕ್ಷಕ ಅಭಿಯಂತರರಾದ ಜಿ.ಕೆ.ಗೋಟ್ಯಾಳ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಎತ್ತರದ ಪ್ರದೇಶವಾಗಿರುವ ಕನಮಡಿ ಗ್ರಾಮಕ್ಕೆ ನೀರು ಹರಿಸುವುದು ಅಸಾಧ್ಯವೆಂದು ಹೇಳಲಾಗುತ್ತಿತ್ತು. ಮನಸ್ಸಿದ್ದಲ್ಲಿ ಮಾರ್ಗವೆಂಬತೆ ಅಸಾಧ್ಯವಾದುದನ್ನು ಸಾಧ್ಯವಾಗಿಸಿ, ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡು ಗುಡ್ಡದ ತುದಿಯಲ್ಲಿರುವ ಕನಮಡಿ ಗ್ರಾಮಕ್ಕೆ ಧರಿದೇವರ ಪಾದಕ್ಕೆ ನೀರು ತಂದು ಅರ್ಪಣೆ ಮಾಡಲಾಗಿದೆ. ಈ ಭಾಗಕ್ಕೆ ನೀರು ಒದಗಿಸಿರುವುದರಿಂದ ಈ ಭಾಗದಲ್ಲಿ ಅತಿ ಹೆಚ್ಚು ದ್ರಾಕ್ಷಿ ಬೆಳೆಯಲಾಗುತ್ತಿದೆ ಎಂದು ಅವರು ಹೇಳಿದರು.
ತುಬಚಿ-ಬಬಲೇಶ್ವರ ಏತ ನೀರಾವರಿಯಲ್ಲಿ ವಿಜಯಪುರ ಜಿಲ್ಲೆಗೆ ಹಂಚಿಕೆಯಾದ ನೀರಿನಲ್ಲಿ ೧ ಟಿಎಂಸಿ ನೀರನ್ನು ತಿಕೋಟಾ ಭಾಗದಲ್ಲಿ ಸ್ಟೋರೇಜ್ ಟ್ಯಾಂಕ್ ಜಲ ಸಂಗ್ರಹಾಗಾರಗಳನ್ನು ನಿರ್ಮಿಸಿ, ಮಳೆಗಾಲದಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳಲಾಗುವುದು. ಈ ನೀರನ್ನು ಬೇಸಿಗೆಯಲ್ಲಿ ಬಳಕೆ ಮಾಡುವ ದೃಷ್ಟಿಯಿಂದ ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕನಮಡಿ ಗ್ರಾಮವನ್ನು ಹುಬ್ಬಳ್ಳಿ ಹಾಗೂ ಜತ್ತ ಪ್ರಮುಖ ಕೇಂದ್ರಗಳಿಗೆ ಸಂಪರ್ಕಿಸಲು ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಲಾಗುವುದು. ರೈತರ ಅನುಕೂಲಕ್ಕಾಗಿ ಈ ಭಾಗದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪಿಸಲಾಗುವುದು. ಯಾತ್ರಿ ನಿವಾಸದಿಂದಾಗಿ ಭಕ್ತರು ಮತ್ತು ಪ್ರವಾಸಿಗರಿಗೆ ಸುಧಾರಿತ ವಸತಿ ವ್ಯವಸ್ಥೆ ಲಭ್ಯವಾಗಿ, ಈ ಭಾಗದ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆತಂತಾಗುತ್ತದೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಹೆಸ್ಕಾಂನ ಅಧಿಕ್ಷಕ ಅಭಿಯಂತರರಾದ ಸಿದ್ದಪ್ಪ ಬಿಂಜಗೇರಿ, ಬಾಗಲಕೋಟೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅಧಿಕ್ಷಕ ಅಭಿಯಂತರರಾದ ರಮೇಶ ಪವಾರ, ಕಾರ್ಯನಿರ್ವಾಹಕ ಅಭಿಯಂತರ ವಾಹೀದ ಜಹಗೀರದಾರ, ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಮಾಲತೇಶ ಚನಗೊಂಡ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಾರ್ಯ ನಿರ್ವಾಹಕ ಇಂಜಿನೀಯರ್ ಜಗದೀಶ ಜಾಧವ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

೧೧೦ ಕೆವಿಯ ೫ ಸ್ಟೇಶನ್‌ಗಳ ನಿರ್ಮಾಣಕ್ಕಾಗಿ ಪ್ರಸ್ತಾವನೆ
ಬಬಲೇಶ್ವರ, ಇಟ್ಟಂಗಿಹಾಳ ಹಾಗೂ ಚಡಚಣದಲ್ಲಿ ೨೨೦ ಕೆವಿ ೩ ಸ್ಟೇಶನ್ ಹಾಗೂ ಕಾರಜೋಳ, ಘೋಣಸಗಿ, ಹೆಬ್ಬಾಳಟ್ಟಿ, ತಾಜಪುರ ಮತ್ತು ಸಾರವಾಡದಲ್ಲಿ ೧೧೦ ಕೆವಿಯ ೫ ಸ್ಟೇಶನ್‌ಗಳ ನಿರ್ಮಾಣಕ್ಕಾಗಿ ಪ್ರಸ್ತಾವನೆ ಸರ್ಕಾರದ ಮುಂದಿದೆ. ಶೀಘ್ರವೇ ಈ ಪ್ರಸ್ತಾವನೆಗಳಿಗೆ ಅನುಮೋದನೆ ದೊರಕಿಸಿ ಈ ಭಾಗದಲ್ಲಿ ವಿದ್ಯುತ್ ಹರಿಯುವಿಕೆಯನ್ನು ಸರಳೀಕರಿಸಿ, ವಿದ್ಯುತ್ ಕೊರತೆಯನ್ನು ಸಂಪೂರ್ಣವಾಗಿ ಪರಿಹರಿಸಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ ಅವರು ಹೇಳಿದರು.

“ಬಬಲೇಶ್ವರ ಮತಕ್ಷೇತ್ರಕ್ಕೆ ಅತಿ ಹೆಚ್ಚಿನ ಅನುದಾನ ಒದಗಿಸುವ ಮೂಲಕ ಅಭಿವೃದ್ದಿ ಕೈಗೊಳ್ಳಲಾಗಿದೆ. ಬಹು ದಶಕಗಳ ಕನಸಾಗಿದ್ದ ಕೆರೆ ತುಂಬುವ ಯೋಜನೆಗಳು ಈ ಯೋಜನೆಗಳಿಂದಾಗಿ ಅಂತರಜಲ ಮಟ್ಟ ಹೆಚ್ಚಾಗಿ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ಕುಡಿಯುವ ನೀರು, ಶಿಕ್ಷಣ, ಯುವಕರಿಗೆ ಉದ್ಯೋಗ, ರಸ್ತೆ ಅಭಿವೃದ್ದಿ, ನೀರಾವರಿ, ವಿದ್ಯುತ್ ಸೇರಿದಂತೆ ಎಲ್ಲ ಕಾರ್ಯಗಳನ್ನು ಕೈಗೊಂಡು ಅಭಿವೃದ್ದಿಗೆ ಆದ್ಯತೆ ನೀಡಲಾಗಿದೆ. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಸಿ.ಎಸ್.ಆರ್. ಅನುದಾನವನ್ನು ಬಳಸಿಕೊಂಡು ಹಂತ-ಹಂತವಾಗಿ ಶಾಲಾ ಕೊಠಡಿಗಳ ನಿರ್ಮಾಣ, ಸ್ಮಾರ್ಟ್ ಕ್ಲಾಸ್‌ಗಳ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ವಹಿಸಲಾಗಿದೆ. ಸಿ.ಎಸ್.ಆರ್. ಅನುದಾನ ಬಳಸಿಕೊಂಡು ಅಭಿವೃದ್ದಿಪಡಿಸಲಾಗುವುದು.”
– ಡಾ ಎಂ.ಬಿ.ಪಾಟೀಲ
ಜಿಲ್ಲಾ ಉಸ್ತುವಾರಿ ಸಚಿವರು, ವಿಜಯಪುರ

