ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಉಕ್ಕಲಿ ರಸ್ತೆಯಲ್ಲಿರುವ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಶುಕ್ರವಾರ ಸಂಜೆ ಸಕ್ಕರೆ,ಕೃಷಿ ಮಾರುಕಟ್ಟೆ, ಜವಳಿ ಸಚಿವ ಶಿವಾನಂದ ಪಾಟೀಲ ವೀಕ್ಷಿಸಿದರು.
ರೂ.೫.೫ ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಕೆರೆ ಅಭಿವೃದ್ಧಿ ಕಾಮಗಾರಿ ಮಾಡುವ ಜೊತೆಗೆ ಇಲ್ಲಿ ಜನರಿಗೆ ಉದ್ಯಾನವನ, ವಾಕಿಂಗ್ ಟ್ರ್ಯಾಕ್, ಮಕ್ಕಳ ಆಟಿಕೆ ಅಳವಡಿಕೆ ಸೇರಿದಂತೆ ಸುಂದರವಾದ ಪ್ರವಾಸಿ ತಾಣವನ್ನಾಗಿ ಮಾಡಲು ಬೇಕಾದ ಅಗತ್ಯ ಕಾಮಗಾರಿಯನ್ನು ಗುತ್ತಿಗೆದಾರರು ನಿಗದಿತ ಕಾಲಾವಧಿಯಲ್ಲಿ ಗುಣಮಟ್ಟದಿಂದ ಪೂರ್ಣಗೊಳಿಸುವಂತೆ ಸಚಿವ ಶಿವಾನಂದ ಪಾಟೀಲರು ಸೂಚಿಸಿದರು.
ನಂತರ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ರೂ. ೧.೩೦ ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಆಟದ ಮೈದಾನದ ಕಾಮಗಾರಿಯನ್ನು ವೀಕ್ಷಿಸಿದರು. ಆಟದ ಮೈದಾನದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸುತ್ತಮುತ್ತ ಸಸಿಗಳನ್ನು ನೆಡಬೇಕು. ಕಾಮಗಾರಿಯನ್ನು ಗುತ್ತಿಗೆದಾರರು ಗುಣಮಟ್ಟದಿಂದ ಮಾಡುವಂತೆ ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣದ ಪಂಚಾಯಿತಿ ಮುಖ್ಯಾಧಿಕಾರಿ ಶಬ್ಬೀರ ರೇವೂರಕರ, ಪಟ್ಟಣ ಪಂಚಾಯಿತಿ ಅಭಿಯಂತರ ಸೋಮು ತುಪ್ಪದ, ಸಣ್ಣ ನೀರಾವರಿ ಇಲಾಖೆಯ ಎಇ ಸುಣದಾಳ, ಪಟ್ಟಣ ಪಂಚಾಯಿತಿ ಸದಸ್ಯ ಶಂಕರ ಶಿವಮತ, ಗುತ್ತಿಗೆದಾರ ಸಚೀನ ಪಾಟೀಲ ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿ ಇದ್ದರು.

