ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಸುಕ್ಷೇತ್ರ ಶ್ರೀಶೈಲ ಜಾತ್ರಾ ಮಹೋತ್ಸವದ ಅಂಗವಾಗಿ ಈಚೆಗೆ ಶ್ರೀಶೈಲದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಬಸವರಾಜ ಎನ್ ಬಿರಾದಾರ ಅವರು ಬರೆದ ನಂದಿ ಕೂಗು ಪುಸ್ತಕವನ್ನು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು, ನಶಿಸುತ್ತಿರುವ ಜೋಡೆತ್ತಿನ ಕೃಷಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನಂದಿ ಕೂಗು ಪುಸ್ತಕವನ್ನು ಬರೆದು ನಂದಿ ಕೂಗು ಅಭಿಯಾನ ಪ್ರಾರಂಭಿಸಿರುವುದು ಶ್ಲಾಘನೀಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಜೋಡೆತ್ತಿನ ಕೃಷಿ ಪುನಶ್ಚೇತನ ಕೆಲಸಕ್ಕೆ ಶ್ರೀಶೈಲಪೀಠವು ಸಂಪೂರ್ಣವಾಗಿ ಬೆಂಬಲವಾಗಿ ನಿಲ್ಲುವುದು ಎಂದರು.
ಕರಬಂಟನಾಳದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಪ್ರಾರಂಭವಾದ ಜೋಡೆತ್ತಿನ ಕೃಷಿ ಪುನಶ್ಚೇತನ ಕಾರ್ಯದಲ್ಲಿ ಪ್ರತಿಯೊಬ್ಬರು ಭಾಗಿಯಾಗಬೇಕಾದ ಅವಶ್ಯಕತೆಯಿದೆ. ಜೋಡೆತ್ತಿನ ಕೃಷಿ ಉಳಿಸಿದರೆ ಮಾತ್ರ ಮಣ್ಣು, ನೀರು ಹಾಗೂ ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯವಿದೆ ಎಂದರು.
ನಂದಿ ಕೂಗು ಪುಸ್ತಕದ ಲೇಖಕ ಬಸವರಾಜ ಬಿರಾದಾರ ಅವರು ಉಪನ್ಯಾಸ ನೀಡಿ ಮಾತನಾಡಿ, ಕಂಬಿ ಮಲ್ಲಯ್ಯನ ಪೂಜಾ ಸಂಸ್ಕೃತಿಯು ಗ್ರಾಮಗಳಲ್ಲಿರುವ ಜೋಡೆತ್ತಿನ ಕೃಷಿಕರ ಭಾವೈಕ್ಯದ ಸಂಕೇತವಾಗಿದೆ. ಹಾಗಾಗಿ ಮಲ್ಲಯ್ಯನ ಭಕ್ತೃರು ನಂದಿ ಕೃಷಿಕರಿಗೆ ಪೂರಕವಾದ ಕಾನೂನು ಹಾಗೂ ಯೋಜನೆ ಜಾರಿಗೆ ತರಲು ಮುಂದಾಳತ್ವ ವಹಿಸಿಕೊಳ್ಳುವ ಅವಶ್ಯಕತೆಯಿದೆ. ಶ್ರೀಶೈಲ ಜಗದ್ಗುರುಗಳು ಶ್ರೀಶೈಲದಲ್ಲಿ ಸುಮಾರು 500 ಕಂಬಿಗಳನ್ನು ಇಟ್ಟು ಪೂಜೆ ಮಾಡಲು ಬೃಹತ್ ಕಂಬಿ ಮಂಟಪ ನಿರ್ಮಾಣ ಮಾಡಲು ಸಂಕಲ್ಪ ಮಾಡುವ ಮೂಲಕ ಭಾರತ ವಿಶ್ವ ಗುರು ಆಗುವುದಕ್ಕೆ ವೇದಿಕೆ ನಿರ್ಮಾಣಮಾಡುತ್ತಿದ್ದಾರೆ ಎಂದು ಶ್ಲಾಘಿಸಿ ಕಂಬ ಮಂಟಪ ನಿರ್ಮಾಣ ಮಾಡುವ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಾಗಣಸೂರಿನ ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿ, ನೂಲದ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀಕ್ಷೇತ್ರ ಗಡ್ಡಿಯ ಸಂಗಮೇಶ್ವರ ಸ್ವಾಮೀಜಿ, ಪ್ರಗತಿಪರ ರೈತ ಬಳೂತಿಯ ನಂದಬಸಪ್ಪ ಸಂಗಪ್ಪ ಚೌದರಿ, ಸಿದ್ದನಾಥ ಗ್ರಾಮದ ಶಿವಾನಂದ ಅಂಗಡಿ ಹಾಗೂ ಇತರರು ಭಾಗವಹಿಸಿದ್ದರು.
ಶಹಾಪೂರಿನ ಶಿವಗೂರೇಶ್ವರ ಸ್ವಾಮೀಜಿ ಕಾರ್ಯಕ್ರಮ ನಿರೂಪಿಸಿದರು.

