ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ರಾಮ ಮಾಳಿ
ವಿಜಯಪುರ: ಹರಕೆ ಹೊತ್ತವರು ತಂಡ ತಂಡವಾಗಿ ಹಗಲು-ರಾತ್ರಿ ಎನ್ನದೇ ಮಲ್ಲಮ್ಮ-ಮಲ್ಲಿಕಾರ್ಜುನನ ಸ್ಮರಣೆ ಮಾಡುತ್ತಾ ಸಾಗುವಾಗ ದಾರಿ ಸವೆಯುವುದು ಗೊತ್ತಾಗುವುದಿಲ್ಲ. ಆತನೇ ನಮ್ಮನ್ನು ಕರೆಸಿಕೊಳ್ಳುತ್ತಾನೆ ಎಂಬುದು ಯಾತ್ರಿಗಳ ಅಭಿಮತ.
ಯುವಕರು, ಹಿರಿಯರು, ವೃದ್ಧರು, ಮಹಿಳೆಯರು ಹೀಗೆ ಸಾವಿರಾರು ಸಂಖ್ಯೆಯಲ್ಲಿ ಯಾತ್ರಿಗಳು ಪಾದಯಾತ್ರೆಯಲ್ಲಿ ಕಾಣಸಿಗುತ್ತಾರೆ. ಇಂಥವರ ಮಧ್ಯದಲ್ಲಿ ವಿಜಯಪುರ ನಗರದ ಎಂ.ಬಿ.ಪಾಟೀಲ ಬಡಾವಣೆಯ ಸ್ಮಿತಾ ಹಾಗೂ ಸಿದ್ಧಾರ್ಥ ದಂಪತಿಗಳ ಎರಡು ವರ್ಷದ ಮಗು ಕಾರ್ತಿಕೇಯ ಪಾಟೀಲನು ಕೈಯಲ್ಲಿ ಬೆತ್ತವನ್ನು ಹಿಡಿದು ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತ ಆಂಧ್ರಪ್ರದೇಶದ ವೆಂಕಟಪುರದಿಂದ ಶ್ರೀಶೈಲಂ ವರೆಗೆ ಕಾಲ್ನಡಿಗೆಯಲ್ಲಿಯೇ ಭಕ್ತರೊಂದಿಗೆ ಹೆಜ್ಜೆ ಹಾಕಿದ್ದು ಭಕ್ತರನ್ನು ನಿಬ್ಬೆರಗಾಗುವಂತೆ ಮಾಡಿತು.
ಸಿದ್ದಪುರಂ ಬಳಿ ಕಡಿಬಾಗಿಲಿನ ವೀರಭದ್ರೇಶ್ವರ ದರ್ಶನ ಪಡೆದು, ಗಿರಿ ಬೆಟ್ಟ ಏರಿ, ಅಂಬಲಿಹಳ್ಳ, ಗಂಗನಹಳ್ಳಿ ನಂತರ ಡೊಂಕ ಮಲ್ಲಯ್ಯನ ಬಾವಿ ನೀರು ಕುಡಿದು, ಭೀಮನಕೊಳ್ಳವನ್ನು ದಾಟಿ, ಕೈಲಾಸ ಬಾಗಿಲಿಗೆ ನಮಸ್ಕಾರವನ್ನು ಮಾಡಿ ಅಟಕೇಶ್ವರ ಸಮೀಪಕ್ಕೆ ಹೊದಾಗ ಸಿಗುವುದೇ ಶ್ರೀಶೈಲ ಮಲ್ಲಯ್ಯನ ದರ್ಶನವನ್ನು ಯುಗಾದಿ ಪಾಡ್ಯದ ದಿನ ಶ್ರೀಶೈಲ ಮಲ್ಲಿಕಾರ್ಜುನನ ರಥೋತ್ಸವದ ದರ್ಶನ ಪಡೆದು ತನ್ನ ಕುಟುಂಬದವರೊಂದಿಗೆ ವಾಪಸ ಮರಳಿದ್ದಾನೆ.

